ತುಂಗಭದ್ರಾ ಮಂಡಳಿ ವರದಿ ನಿರ್ಲಕ್ಷಿಸಿದ ಸರ್ಕಾರ: ಎ.ಎಸ್.ಪಾಟೀಲ ನಡಹಳ್ಳಿ ಆರೋಪ

A S Patil Nadahalli
Published on

ಬೆಂಗಳೂರು: ಜಲಾಶಯದ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತುಂಗಭದ್ರಾ ಮಂಡಳಿ ಸಲ್ಲಿಸಿದ ವರದಿಯನ್ನೇ ರಾಜ್ಯ ಸರ್ಕಾರ ನಿರ್ಲಕ್ಷಿಸಿದ್ದು, ಕ್ರಸ್ಟ್‌ಗೇಟ್ ಅವಘಡಕ್ಕೆ ಮೂಲ ಕಾರಣವೆಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಟಿ.ಬಿ. ಬೋರ್ಡ್ ಆಡಳಿತ ಮಂಡಳಿಯ 2022-23ನೇ ಸಾಲಿನ ಸಭೆಯ ವರದಿಯಲ್ಲಿರುವ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದರು.

ಮಂಡಳಿಯ ಈ ವರದಿ 2024ರಲ್ಲಿ ರಾಜ್ಯ ಸರ್ಕಾರದ ಕೈಸೇರಿದೆ. ಇದಿಷ್ಟೇ ಅಲ್ಲ, ಕೇಂದ್ರ ಸರ್ಕಾರ ಅಣೆಕಟ್ಟೆ ಸುರಕ್ಷತಾ ಕಾಯ್ದೆ 2021ರಂತೆ ಕೈಗೊಳ್ಳಬೇಕಾದ ಕ್ರಮಗಳು, ನಿಯಮಾವಳಿ ಬಗ್ಗೆ ಸ್ಪಷ್ಟ ಉಲ್ಲೇಖವಿದೆ.

ಈ ಕಾಯ್ದೆಯಂತೆಯೇ ರಾಜ್ಯ ಅಣೆಕಟ್ಟೆ ಸುರಕ್ಷತಾ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಸಂಸ್ಥೆಗೆ ಬೇಕಾದ ಮುಖ್ಯ ಇಂಜಿನಿಯರ್ ಶ್ರೇಣಿ ಅಧಿಕಾರಿ ಸೇರಿ ಅಗತ್ಯ ತಜ್ಞರು, ಅಧಿಕಾರಿಗಳನ್ನು ನೇಮಿಸದೆ ಪ್ರದರ್ಶನ ಗೊಂಬೆಯಂತೆ ಇರಿಸಿದೆ.

ನೈಜ ಕಾರಣವೇನು ?

ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿರುವುದಕ್ಕೆ ನೈಜ ಕಾರಣವೇನು ? ಚೈನ್ ಲಿಂಕ್ ಕಟ್ ಆಗಿದ್ದರಿಂದ ಕ್ರಸ್ಟ್ ಗೇಟ್ ಕೊಚ್ಚಿ ಹೋಯಿತು ವರದಿ ಕೊಟ್ಟಿದ್ದು ಯಾರು ? ಎನ್ನುವುದನ್ನು ಸರ್ಕಾರ ಹೇಳಬೇಕು ಎಂದು ಎ.ಎಸ್.ಪಾಟೀಲ ಒತ್ತಾಯಿಸಿದರು.

ಟಿ ಬಿ ಡ್ಯಾಮ್ 70 ವರ್ಷಗಳಷ್ಟು ಹಳೆಯದು, ಸುಣ್ಣ ಹಾಗೂ ಗಾರೆಯಿಂದ ಕಟ್ಟೆ ನಿರ್ಮಾಣವಾಗಿದೆ ಕ್ರಸ್ಟ್‌ಗೇಟ್‌ಗಳು ಹೈಡ್ರಾಲಿಕ್ ಅಲ್ಲ, ವರ್ಟಿಕಲ್ ಗೇಟ್ ವ್ಯವಸ್ಥೆಯಿದೆ. ಗೇಟ್‌ಗಳನ್ನು ಎತ್ತಲು ಮಾತ್ರ ಚೈನ್ ಬಳಕೆಯಾಗುತ್ತದೆ, ಒಮ್ಮೆ ಗೇಟ್ ಎತ್ತಿದ ಮೇಲೆ ಈ ಚೈನ್‌ಗೆ ಯಾವುದೇ ಕೆಲಸವಿಲ್ಲ.

ಚೈನ್ ಲಿಂಕ್ ಕಟ್ ಆಗುವುದಕ್ಕೂ ಕ್ರಸ್ಟ್‌ಗೇಟ್ ಕಿತ್ತು ಹೋಗುವುದಕ್ಕೂ ಸಂಬಂಧವಿಲ್ಲ. ಅತಿಯಾದ ನೀರಿನ ಒತ್ತಡದಿಂದಲೇ ಕೊಚ್ಚಿ ಹೋಗಿದೆ ಎಂದು ಎ.ಎಸ್.ಪಾಟೀಲ ನಡಹಳ್ಳಿ ಪ್ರತಿಪಾದಿಸಿದರು.

ಮಂಡಳಿ ವರದಿ ಪ್ರಕಾರ ಕ್ರಸ್ಟ್‌ಗೇಟ್‌ಗಳ ಬದಲಾವಣೆ, ಹೆಚ್ಚುವರಿಯಾಗಿ ಮೂರು ಸ್ಪಾಪ್ ಲಾಗ್ ಗೇಟ್ ಮೀಸಲಿಡಬೇಕು ಎಂಬುದನ್ನೂ ಸರ್ಕಾರ ಕಡೆಗಣಿಸಿದೆ ಎಂದು ದೂರಿದರು.

ಚಿಕನ್ ಬಿರಿಯಾನಿ ತಿನ್ನಲು ಹೋಗಿದ್ದರೆ ?

ಅಣೆಕಟ್ಟೆ ಕ್ರಸ್ಟ್‌ಗೇಟ್ ನಿರ್ವಹಣೆಗೆ ಪ್ರತ್ಯೇಕ ವಿಭಾಗವಿದೆ. ಲಾಗ್ ಬುಕ್ ಹೈಡ್ರಾಲಿಕ್ ಇಂಜಿನಿಯರ್ ನಿರ್ವಹಿಸಿ, ಹೊರ-ಒಳ ಹರಿವು, ಪ್ರತಿ ತಾಸಿಗೊಮ್ಮೆ ದತ್ತಾಂಶವನ್ನು ಲಾಗ್ ಬುಕ್‌ನಲ್ಲಿ ದಾಖಲು ಮಾಡಬೇಕು.

ಆದರೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಒಬ್ಬರನ್ನು ಈ ಕೆಲಸಕ್ಕೆ ನಿಯೋಜಿಸಿದ್ದು, ಡ್ಯಾಮ್ ಸುರಕ್ಷತೆ ವಿಷಯದಲ್ಲಿ ಸರ್ಕಾರಕ್ಕೆ ಅದೆಷ್ಟು ಅಸಡ್ಡೆ ಎಂದು ಗೊತ್ತಾಗುತ್ತದೆ. ಹೆಲಿಕಾಪ್ಟರ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೋದದ್ದು ಚಿಕನ್ ಬಿರಿಯಾನಿ ತಿನ್ನುವುದಕ್ಕೋ ಅಥವಾ ಲಾಗ್ ಬುಕ್ ಮತ್ತಿತರ ಮಾಹಿತಿಯನ್ನು ಪರಿಶೀಲಿಸುವುದಕ್ಕೋ ?

ದೈವವಶಾತ್ ಒಂದು ಗೇಟ್ ಕಿತ್ತು ಹೋಗಿದೆ. ನೀರಿನ ಒತ್ತಡಕ್ಕೆ ಹೆಚ್ಚು ಗೇಟ್ ಕಿತ್ತು ಹೋಗಿದ್ದರೆ ನದಿಪಾತ್ರದ ಕೆಳಗೆ ಇರುವ ಜನವಸತಿ ಪ್ರದೇಶದ ಗತಿ ಏನಾಗುತ್ತಿತ್ತು ?. ಮಾನವ ನಿರ್ಮಿತ ವಿಪತ್ತಿಗೆ ನಾಲ್ಕು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ ತಲ್ಲಣಿಸಿದೆ. ಒಂದು ಹಂಗಾಮಿನ ಬೆಳೆ ಕೈತಪ್ಪಿ ಹೋದರೆ 60 ಸಾವಿರ ಕೋಟಿ ರೂ.ನಷ್ಟವಾಗಲಿದೆ.

ಅಧಿಕಾರಿಗಳು ಹೇಳಿದ್ದಕ್ಕೆಲ್ಲ ತಲೆಯಾಡಿಸಿ ಚಿಕನ್ ಬಿರಿಯಾನಿ ತಿಂದು ಬಂದ ಡಿಸಿಎಂಗೆ ಇಂತಹ ಗಂಭೀರ, ಸಂಕಷ್ಟಗಳು ಹೇಗೆ ಅರ್ಥವಾಗುತ್ತವೆ. ಇದರಿಂದಾಗಿ ಯಾರನ್ನೋ ಹೊಣೆ ಮಾಡುವುದಿಲ್ಲ ಎಂಬ ತಿಪ್ಪೆ ಸಾರಿಸುವ ಹೇಳಿಕೆ ನೀಡಿದ್ದಾರೆ ನಡಹಳ್ಳಿ ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net