

ಬೆಂಗಳೂರು: ಕೊಲೆ, ಕಳ್ಳತನ, ಸುಲಿಗೆ, ಅತ್ಯಾಚಾರ ಸೇರಿ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿತರಾಗಿ ಪೊಲೀಸರ ವಶದಲ್ಲಿರುವವರ ಆಹಾರ ಭತ್ಯೆಯನ್ನು (ಲಾಕಪ್ ಕಾಂಟಿಜೆನ್ಸ್) ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಒಬ್ಬ ಆರೋಪಿಗೆ ದಿನಕ್ಕೆ ನಿಗದಿಯಾಗಿದ್ದ 75 ರೂ.ಗಳನ್ನು 150 ರೂ.ಗೆ ಏರಿಕೆ ಮಾಡಲಾಗಿದೆ.
ಪೊಲೀಸರು ಅರೆಸ್ಟ್ ಮಾಡಿದ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವವರೆಗೂ ಠಾಣಾ ಲಾಕಪ್‌ನಲ್ಲೇ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಆತನಿಗೆ ಪೊಲೀಸರೇ ಊಟ, ತಿಂಡಿ ವ್ಯವಸ್ಥೆ ಮಾಡಬೇಕಾಗುತ್ತದೆ.
ಈವರೆಗೆ ಇದ್ದಂತಹ 75 ರೂ.ನಲ್ಲಿ ಆಹಾರ ನೀಡಲು ಸಾಧ್ಯವಾಗದ ಕಾರಣ ಆಹಾರ ಭತ್ಯೆ ಪರಿಷ್ಕರಣೆಗೆ ಪೊಲೀಸ್ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭತ್ಯೆ ಪರಿಷ್ಕರಿಸಲಾಗಿದೆ.