

ಬೆಂಗಳೂರು: ರಾಜ್ಯದ ಎಲ್ಲ ವಿಚಾರಗಳ ಬಗ್ಗೆ ಸಂವಿಧಾನಾತ್ಮಕವಾಗಿ ನೋಡುವ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರು ಏಕಪಕ್ಷೀಯವಾಗಿ ವರ್ತಿಸಬಾರದು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹೇಳಿದೆ.
ಬಿಜೆಪಿ, ಜೆಡಿಎಸ್ ಪಕ್ಷಗಳು ಸಾಮಾಜಿಕ ಕಾರ್ಯಕರ್ತನ ಮೂಲಕ ರಾಜ್ಯಪಾಲರಿಗೆ ದೂರು ಕೊಟ್ಟು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಹಾಕಿಸಲು ಹುನ್ನಾರ ನಡೆಸುತ್ತಿರುವುದು ಕಾನೂನುಬಾಹಿರ. ಈ ಬಗ್ಗೆ ನಮ್ಮ ವೇದಿಕೆ ವತಿಯಿಂದ ಮನವರಿಕೆ ಮಾಡಿಕೊಡಲು ಸಮಯ ನೀಡುವಂತೆ ರಾಜ್ಯಪಾಲರಿಗೆ ಕೋರಲಾಗಿದೆ ಎಂದು ವೇದಿಕೆ ಅಧ್ಯಕ್ಷ ಮತ್ತು ಮಾಜಿ ಶಾಸಕ ಎಂ.ಸಿ.ವೇಣುಗೋಪಾಲ್ ಹೇಳಿದರು.
45 ವರ್ಷಗಿಂತ ಹೆಚ್ಚು ಕಾಲ ಕಪ್ಪುಚಿಕ್ಕೆ ಇಲ್ಲದಂತೆ "2ನೇ ದೇವರಾಜ ಅರಸು' ಎಂಬ ಖ್ಯಾತಿಯೊಂದಿಗೆ ಸಿದ್ದರಾಮಯ್ಯ ಅವರು ಕಾರ್ಯಭಾರ ಮಾಡುತ್ತಿದ್ದಾರೆ. ರಾಜ್ಯದ ಜನರ ಪಾಲಿಗೆ "ಅನ್ನರಾಮಯ್ಯ' ಎಂದು ಖ್ಯಾತಿ ಹೊಂದಿದ್ದಾರೆ. ನುಡಿದಂತೆ ನಡೆದು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಮುಡಾ ಹಗರಣ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಅವರನ್ನು ಬೆಂಬಲಿಸಿ ಮೈಸೂರಿನಲ್ಲಿ ನಡೆದಿದ್ದ ಸಮಾವೇಶಕ್ಕೆ ನಮ್ಮ ಬೆಂಬಲ ಇದೆ. ಈ ವಿಚಾರವನ್ನು ಬಿಜೆಪಿ, ಜೆಡಿಎಸ್ನವರು ಕೈಬಿಡದಿದ್ದರೆ ಬರುವ ದಿನಗಳಲ್ಲಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣ, ಭ್ರಷ್ಟಾಚಾರಗಳನ್ನು ದಾಖಲೆಸಮೇತ ಹೊರತೆಗೆದು ಜನರ ಮುಂದಿಟ್ಟು ನ್ಯಾಯ ಕೇಳುವುದಾಗಿ ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು ಎಚ್ಚರಿಕೆ ನೀಡಿದ್ದಾರೆ. ವೇದಿಕೆ ಪದಾಧಿಕಾರಿಯಾದ ಎಲ್.ಎ. ಮಂಜುನಾಥ್, ಎಸ್.ಟಿ. ಶ್ರೀನಿವಾಸ್, ಎಸ್. ಮಂಜುನಾಥ್, ಪ್ರಶಾಂತ್, ಶಿವಶಂಕರ್, ಮಾಜಿ ಜಿಲ್ಲಾಧಿಕಾರಿ ಬಿ.ಕೆ. ಮೋಹನ್ ಕುಮಾರ್ ಉಪಸ್ಥಿತರಿದ್ದರು.