ಸರ್ಕಾರಿ ಸಾರಿಗೆ ದುಬಾರಿ; ರಾಜ್ಯದಲ್ಲಿ ಪ್ರಯಾಣ ದರ ಶೇ.15 ಹೆಚ್ಚುವರಿ

KSRTC
Published on

ಬೆಂಗಳೂರು: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಸಾರಿಗೆ ನಿಗಮಗಳಿಗೆ ಹುಲುಕಡ್ಡಿಯಷ್ಟಾದರೂ ಆಸರೆ ಆಗುವ ಉದ್ದೇಶದಿಂದ ಸರ್ಕಾರ ಪ್ರಯಾಣ ದರ ಪರಿಷ್ಕರಣೆಗೆ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ಪ್ರಕಾರ ಜ.5ರಿಂದ ಅನ್ವಯವಾಗುವಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳವಾಗಲಿದೆ. ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಶೇ.30ಕ್ಕಿಂತ ಹೆಚ್ಚು ದರ ಪರಿಷ್ಕರಣೆ ಅನಿವಾರ್ಯ ಎಂದು ಸಾರಿಗೆ ನಿಗಮಗಳು ಪ್ರತಿಪಾದಿಸಿದ್ದವು. ಬಳಿಕ ಸರ್ಕಾರ ಶೇ.10ರಷ್ಟು ದರ ಪರಿಷ್ಕರಣೆ ಬಯಸಿತ್ತು. ಅಂತಿಮವಾಗಿ ಶೇ.15ರಷ್ಟು ಹೆಚ್ಚಿಸಲು ತೀರ್ವನಿಸಿದೆ. ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ಎಲ್ಲ ವರ್ಗದ ಲಕ್ಸುರಿ ಬಸ್​ಗಳಿಗೆ ಸಮಾನವಾಗಿ ಪ್ರಯಾಣ ದರ ಹೆಚ್ಚಿಸಲಾಗುತ್ತಿದೆ.

ಸಮರ್ಥನೆ: ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ ಹಾಕಿದಂತಾಗಿದೆ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಪುರುಷರ ಪ್ರಯಾಣ ದರ ಹೆಚ್ಚಿಸಿ ಏನು ಪ್ರಯೋಜನ ಎಂಬ ಸುದ್ದಿಗಾರರ ಪ್ರಶ್ನೆಗೆ ಸಚಿವ ಎಚ್.ಕೆ.ಪಾಟೀಲ್, ‘ಜನಕಲ್ಯಾಣಕ್ಕಾಗಿ ಕೆಲವು ವರ್ಗದವರು ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ನೆರೆ ರಾಜ್ಯಗಳಲ್ಲಿನ ಪ್ರಯಾಣ ದರ ಗಮನಿಸಿಯೇ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ’ ಎಂದು ಉತ್ತರಿಸಿದರು. ಶಕ್ತಿ ಯೋಜನೆಯಿಂದಲೇ ಈ ಸ್ಥಿತಿ ಬಂದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಶಕ್ತಿ ಯೋಜನೆಗಾಗಿ ಈ ವರ್ಷ ದಲ್ಲಿ 5015 ಕೋಟಿ ರೂ. ತೆಗೆದಿಡಲಾಗಿತ್ತು. ಮಾಸಿಕವಾಗಿ ನಿಗಮ ಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಸಾಲ ಪಡೆಯಲು ಒಪ್ಪಿಗೆ: ಶೇ.15 ದರ ಹೆಚ್ಚಳದಿಂದಾಗಿ ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ ಅಂದಾಜು 74.85 ಕೋಟಿ ರೂ. ಆದಾಯ ಹೆಚ್ಚಾಗಲಿದೆ. ಜತೆಗೆ ತಕ್ಷಣದ ಸಮಸ್ಯೆ ಪರಿಹಾರಕ್ಕೆ 2 ಸಾವಿರ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಖಾತ್ರಿ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು. 2024ರ ನವೆಂಬರ್ ಅಂತ್ಯದಲ್ಲಿ ನಾಲ್ಕು ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ, ರಜೆ ನಗದೀಕರಣ, ಸಿಬ್ಬಂದಿ ಬಾಕಿ, ಇಂಧನ ಸರಬರಾಜುದಾರರ ಬಾಕಿ, ಅಪಘಾತ ಪರಿಹಾರ ಪ್ರಕರಣಗಳು, ಇತರೆ ಹಾಗೂ ನಿವೃತ್ತರಿಗೆ ಪರಿಷ್ಕೃತ ಉಪಧನ, ಸಾಲದ ಹೊಣೆಗಾರಿಕೆಗಳು ಸೇರಿದಂತೆ 6330.25 ಕೋಟಿ ರೂ. ಹೊಣೆಗಾರಿಕೆ ಬಾಕಿಯಾಗಿದೆ. ಈ ಹೊರೆಯನ್ನು ತಾಳಿಕೊಳ್ಳಲು ತಕ್ಷಣವೇ 2 ಸಾವಿರ ಕೋಟಿ ರೂ.ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ಬಜೆಟ್​ನಲ್ಲಿ ಸಾರಿಗೆ ನಿಗಮಗಳಿಗೆ ಪರಿಹಾರ ಕೊಡಲಾಗುತ್ತದೆ.

ಖಾಸಗಿ ಬಸ್ ದರವೂ ಪರಿಷ್ಕರಣೆ?: ಸರ್ಕಾರಿ ಸಾರಿಗೆ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್​ಗಳೂ ಪ್ರಯಾಣ ದರ ಪರಿಷ್ಕರಣೆಗೆ ಚಿಂತನೆ ನಡೆಸಿವೆ. ‘ನಾವು ಜಿಲ್ಲಾಮಟ್ಟದಲ್ಲಿ ಬೇಡಿಕೆ ಇಡುತ್ತೇವೆ. ಬಳಿಕ ಆದೇಶ ಹೊರಬೀಳಲಿದೆ. ಈ ಪ್ರಕ್ರಿಯೆಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸುತ್ತೇವೆ’ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಪ್ರತಿನಿಧಿಗಳು ಹೇಳಿದ್ದಾರೆ.

ದರ ಹೆಚ್ಚಳಕ್ಕೆ 4 ಕಾರಣ

  1. ರಾಜ್ಯದ 4 ರಸ್ತೆ ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು 2015ರ ಬಳಿಕ ಪ್ರಯಾಣ ದರ ಪರಿಷ್ಕರಿಸಿಲ್ಲ
  2. 2015 ಜ.10ರಂದು ಪ್ರಯಾಣ ದರ ಪರಿಷ್ಕರಿಸಿದಾಗ ಪ್ರತಿ ಲೀಟರ್ ಡೀಸೆಲ್ 60.98 ರೂ. ಇತ್ತು. ಅಂದು ರಾಜ್ಯದ 4 ಸಾರಿಗೆ ನಿಗಮಗಳ ದೈನಂದಿನ ಒಟ್ಟು ಡೀಸೆಲ್ ವೆಚ್ಚ 9.16 ಕೋಟಿ ರೂ. ಇತ್ತು. ಸದ್ಯ ಈ ಮೊತ್ತ 13.21 ಕೋಟಿ ರೂ.ಗೆ ಹೆಚ್ಚಳವಾಗಿದೆ.
  3. ಈ ನಾಲ್ಕು ಸಾರಿಗೆ ನಿಗಮಗಳ ದೈನಂದಿನ ಸಿಬ್ಬಂದಿ ವೆಚ್ಚ 12.85 ಕೋಟಿ ರೂ. ಇದ್ದದ್ದು, ಸದ್ಯ 18.36 ಕೋಟಿ ರೂ.ಗೆ ಏರಿಕೆ ಆಗಿದೆ. ನಿತ್ಯ 9.56 ಕೋಟಿ ರೂ. ಹೆಚ್ಚುವರಿ ಹೊರೆ ಆಗುತ್ತಿದೆ.
  4. ಆಂಧ್ರ, ಮಹಾರಾಷ್ಟ್ರ, ತೆಲಂಗಾಣಗಳ ಪ್ರಯಾಣ ದರಕ್ಕೆ ಹೋಲಿಸಿದರೆ ಶೇ.15ರ ಪರಿಷ್ಕರಣೆ ಬಳಿಕವೂ ರಾಜ್ಯದಲ್ಲಿ ಕಡಿಮೆ ಇರಲಿದೆ. ಹೀಗಾಗಿ ಹೆಚ್ಚಿನ ಹೊರೆ ಎಂದು ಭಾವಿಸಬೇಕಿಲ್ಲ.

ಸಿಎಂ ಸಿದ್ದರಾಮಯ್ಯನವರೇ ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ, ನಿಮ್ಮ ಸರ್ಕಾರದ ಬಕಾಸುರನ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು? ಶೀಘ್ರದಲ್ಲೇ ಕನ್ನಡಿಗರು ಸರ್ಕಾರದ ವಿರುದ್ಧ ದಂಗೆ ಏಳುವುದು ಅನಿವಾರ್ಯ.

| ಆರ್.ಅಶೋಕ್ ವಿಧಾನಸಭೆ ವಿರೋಧ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net