

ಕರೊನಾ ಸೋಂಕು ಮತ್ತು ಅದನ್ನು ನಿಯಂತ್ರಿಸಲು ವಿಧಿಸಲಾಗಿರುವ ದಿಗ್ಬಂಧನ ಹತ್ತುಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಮಧ್ಯೆ, ಮೇ 3ರವರೆಗೆ ವಿಧಿಸಲಾಗಿದ್ದ ಲಾಕ್ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಲಾಕ್ಡೌನ್ ಹಂತಹಂತವಾಗಿ ಸಡಿಲಗೊಂಡು, ಪೂರ್ತಿ ತೆರವಾದ ಬಳಿಕ ಆಯಾ ಕ್ಷೇತ್ರಕ್ಕೆ ಆಗಿರುವ ನಷ್ಟ, ಚೇತರಿಕೆಗೆ ಕೈಗೊಳ್ಳಬೇಕಾದ ಕ್ರಮಗಳು, ಆಯಾ ವಲಯದ ಭವಿಷ್ಯದ ಕಳವಳಗಳು ಸ್ಪಷ್ಟವಾಗಿ ಗೋಚರವಾಗಲಿವೆ. ಏಪ್ರಿಲ್ ತಿಂಗಳ ಪೂರ್ತಿ ಯಾವುದೇ ವಹಿವಾಟು ನಡೆಯದ್ದರಿಂದ ಆರ್ಥಿಕ ನಷ್ಟದ ಪ್ರಮಾಣ ಹೆಚ್ಚಿದೆ. ಮೇ ತಿಂಗಳಲ್ಲೂ ಇದೇ ಸ್ಥಿತಿ ಮುಂದುವರಿಯುವ ಲಕ್ಷಣಗಳಿವೆ. ಹಸಿರು ವಲಯದ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಕೈಗಾರಿಕೆಗಳು ಕೆಲ ನಿಬಂಧನೆಗಳೊಂದಿಗೆ ಕಾರ್ಯಾರಂಭ ಮಾಡಲಿವೆ. ಈ ನಡುವೆ, ರಾಜ್ಯ ಸರ್ಕಾರ ತೀವ್ರ ಥರದ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ನೀಡಲು ಮುಂದಾಗಿರುವುದು ಒಂದಿಷ್ಟು ಆಶಾವಾದ ಮೂಡಿಸಿದೆ ಎನ್ನಬಹುದು.
ಮರಳಿನ ಸಮಸ್ಯೆ ಜನಸಾಮಾನ್ಯರಿಂದ ಹಿಡಿದು, ಸರ್ಕಾರಿ ವಲಯಕ್ಕೂ ಕಾಡುತ್ತಿದೆ ಎಂಬುದು ವಾಸ್ತವ. ಮನೆ ಕಟ್ಟಲು, ಇತರೆ ನಿರ್ಮಾಣ ಕಾಮಗಾರಿಗಳಿಗೂ ಮರಳಿನ ಅಲಭ್ಯತೆ. ಹೀಗಾಗಿ, ನಿರ್ಮಾಣ ಕಾರ್ಯದ ವೆಚ್ಚ ಮತ್ತಷ್ಟು ಏರಿಕೆ ಆಗಿ, ಪರಿಹಾರ ಏನು ಎಂಬುದು ತೋಚದಂತಾಗಿತ್ತು. ಕಡೆಗೂ, ರಾಜ್ಯ ಸರ್ಕಾರ ಹೊಸ ಮರಳು ನೀತಿಗೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಹೊಸ ನೀತಿಗೆ ಅಧಿಕೃತ ಮುದ್ರೆ ಹಾಕಲಾಗಿದೆ. ಪ್ರತಿ ಮೆಟ್ರಿಕ್ ಟನ್ ಮರಳಿಗೆ 700 ರೂಪಾಯಿ ದರವನ್ನು ನಿಗದಿ ಮಾಡಲಾಗಿದ್ದು, ಮರಳು ಬ್ಲಾಕ್ ಗುರುತಿಸುವ ಮತ್ತು ಅದನ್ನು ಅಗತ್ಯ ಇರುವವರಿಗೆ ಒದಗಿಸುವ ಜವಾಬ್ದಾರಿಯನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗಿದೆ. ಈವರೆಗೆ ಮರಳಿನಿಂದ ವಾರ್ಷಿಕವಾಗಿ 130 ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿತ್ತು. ಹೊಸ ನೀತಿಯ ಪರಿಣಾಮ ಹೆಚ್ಚುವರಿಯಾಗಿ 60-70 ಕೋಟಿ ರೂ. ರಾಜಸ್ವ ಸಂಗ್ರಹವಾಗುವ ನಿರೀಕ್ಷೆ ಇದೆ. ಅಲ್ಲದೆ, ಅಕ್ರಮಗಳಿಗೆ ಕಡಿವಾಣ ಬಿದ್ದು, ಜನರಿಗೆ ಮರಳಿನ ಲಭ್ಯತೆ ಸುಲಭವಾಗಲಿದೆ ಎಂಬುದು ಸಮಾಧಾನದ ಸಂಗತಿ. ಹೊಸನೀತಿಯನ್ನು ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆಯೂ ಅಧಿಕಾರಿಗಳ ಮೇಲಿದೆ.
ಮತ್ತೊಂದೆಡೆ, ರೈತರಿಗೆ ನಿರಾಳದ ಸುದ್ದಿಯನ್ನು ಸರ್ಕಾರ ನೀಡಿದೆ. ಬಗರ್ಹುಕುಂ ತಿರಸ್ಕೃತ ಅರ್ಜಿದಾರರಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಲಾಗಿದೆ. ಲಾಕ್ಡೌನ್ ಮುಗಿಯುತ್ತಿದ್ದಂತೆ ಹೊಸ ದಿನಾಂಕ ಪ್ರಕಟಿಸಿ, ಭೂ ಸುಧಾರಣಾ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ 13 ಲಕ್ಷ ರೈತರಿಗೆ ಲಾಭವಾಗುವ ನಿರೀಕ್ಷೆ ಇದೆ. ಬಗರ್ಹುಕುಂ ಅರ್ಜಿ ತಿರಸ್ಕೃತಗೊಂಡ ರೈತರಲ್ಲಿ ಈ ಮೂಲಕ ಹೊಸ ನಿರೀಕ್ಷೆ ಮೂಡಿದೆ. ಸರ್ಕಾರದ ಈ ಕ್ರಮಗಳು ಜನರ ಸಂಕಷ್ಟವನ್ನು ಕಡಿಮೆ ಮಾಡುವಲ್ಲಿ ಪೂರಕವಾಗಿ ಪರಿಣಮಿಸಲಿವೆ ಎಂಬುದರಲ್ಲಿ ಅನುಮಾನವಿಲ್ಲ.