ಮಧ್ಯಮ ವರ್ಗದವರ ಹೊರೆ ಕಡಿಮೆ ಮಾಡಲು ಸರ್ಕಾರ ಚಿಂತನೆ; ಶೇ.12 ರಷ್ಟು ಜಿಎಸ್‌ಟಿ ಸ್ಲ್ಯಾಬ್ ರದ್ದುಗೊಳಿಸುವ ಸಾಧ್ಯತೆ| gst

GST
Published on

ಭಾರತದ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಚನೆಯಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಈ ಸ್ಲ್ಯಾಬ್‌ನಲ್ಲಿರುವ ಹೆಚ್ಚಿನ ಉತ್ಪನ್ನಗಳು ಶೇ. 5ರ ಸ್ಲ್ಯಾಬ್‌ಗೆ ಬರಲಿದ್ದು, ದರ ಇಳಿಕೆಯಾಗುವ ಮೂಲಕ ಇದರ ಲಾಭ ನೇರವಾಗಿ ಜನರಿಗೆ ತಲುಪಲಿದೆ.

ನವದೆಹಲಿ; ಆದಾಯ ತೆರಿಗೆಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿ ರಿಲೀಫ್‌ ನೀಡಿದ್ದ ಮೋದಿ ಸರ್ಕಾರ, ಇದೀಗ ಕೆಲವು ವಸ್ತುಗಳ ಬೆಲೆಯನ್ನೂ ಇಳಿಕೆ ಮಾಡುವ ಮೂಲಕ ಮತ್ತೊಂದು ಉಡುಗೊರೆ ನೀಡಲು ಸಜ್ಜಾಗಿದೆ.

ಮಧ್ಯಮ ವರ್ಗ ಬಳಸುವ ವಸ್ತುಗಳು ಈ ಸ್ಲ್ಯಾಬ್‌ನಲ್ಲಿ ಇರುವುದರಿಂದ ಅವುಗಳ ದರ ಕಡಿಮೆಯಾಗಲಿದೆ. ಟೂತ್‌ಪೇಸ್ಟ್ ಛತ್ರಿಗಳು, ಹೊಲಿಗೆ ಯಂತ್ರಗಳು, ಅಡುಗೆ ಪಾತ್ರೆಗಳು, ಎಲೆಕ್ಟ್ರಿಕ್ ಐರನ್‌ ಬಾಕ್ಸ್‌, ಗೀಸರ್‌ಗಳು, ಸಣ್ಣ ಸಾಮರ್ಥ್ಯದ ತೊಳೆಯುವ ಯಂತ್ರಗಳು, 1,000 ರೂಪಾಯಿಗಿಂತ ಹೆಚ್ಚು ಬೆಲೆಯ ರೆಡಿಮೇಡ್‌ ಬಟ್ಟೆಗಳು, ಸ್ಟೇಷನರಿ ವಸ್ತುಗಳು, ಲಸಿಕೆಗಳು, ಸೆರಾಮಿಕ್‌ ಟೈಲ್ಸ್‌ ಮತ್ತು ಕೃಷಿ ಉಪಕರಣಗಳು ಸೇರಿ ಮುಂತಾದ ವಸ್ತುಗಳು ಸದ್ಯ ಶೇ. 12 ಜಿಎಸ್‌ಟಿ ಸ್ಲ್ಯಾಬ್‌ನಲ್ಲಿವೆ. ಆ ಸ್ಲ್ಯಾಬ್‌ ಅನ್ನು ತೆಗೆದುಹಾಕಿದರೆ, ಇವುಗಳಲ್ಲಿ ಹೆಚ್ಚಿನವು ಶೇ. 5ರ ಸ್ಲ್ಯಾಬ್‌ಗೆ ಬರಲಿವೆ.

ಮುಂಬರುವ 56 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ತಿಂಗಳ ಕೊನೆಯಲ್ಲಿ ಅಧಿವೇಶನ ನಡೆಯಬಹುದು ಎಂದು ಮೂಲಗಳು ಸೂಚಿಸಿವೆ. ಕೇಂದ್ರ ಹಣಕಾಸು ಸಚಿವರು ಅಧ್ಯಕ್ಷತೆ ವಹಿಸಿರುವ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ತೆರಿಗೆ ದರಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ.

ಸರ್ಕಾರದಿಂದ ಈಗಾಗಲೇ ಸಿಕ್ಕಿರುವ ಸೂಚನೆ

ಜಿಎಸ್‌ಟಿ ವಿಷಯದಲ್ಲಿ ದೊಡ್ಡ ಪರಿಹಾರದ ಸೂಚನೆಗಳು ಸರ್ಕಾರದಿಂದ ಈಗಾಗಲೇ ಸಿಕ್ಕಿವೆ. ಮಾರ್ಚ್ ತಿಂಗಳಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ತೆರಿಗೆ ಸ್ಟ್ರಾಬ್ ಅನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಜಿಎಸ್‌ಟಿ ದರಗಳು ಇನ್ನಷ್ಟು ಕಡಿಮೆಯಾಗುತ್ತವೆ ಎಂದು ಹೇಳಿದ್ದರು. ಅಂದಿನಿಂದ, ಜಿಎಸ್‌ಟಿ ತೆರಿಗೆ ಸ್ಟ್ರಾಬ್ ಬದಲಾವಣೆಯ ನಿರೀಕ್ಷೆ ಇತ್ತು ಮತ್ತು ಈಗ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net