

ಉತ್ತರಕನ್ನಡ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕುರಿತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಗೋಕರ್ಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಹೆಬ್ಬಾರ್, ಸರ್ಕಾರವನ್ನು ಮುನ್ನಡೆಸುವ ಮುಖ್ಯಮಂತ್ರಿಯವರಿಗೆ ಪರಮೋಚ್ಚ ಅಧಿಕಾರವಿದೆ. ಅವರು ಯಾವುದೇ ಇಲಾಖೆಯಲ್ಲೂ ಕಾನೂನುಬದ್ಧವಾಗಿ ಅಧಿಕಾರ ಚಲಾಯಿಸಬಹುದು. ಈ ಹಿಂದಿನ ಎಲ್ಲ ಮುಖ್ಯಮಂತ್ರಿಗಳೂ ಹೀಗೆಯೇ ಅಧಿಕಾರ ಚಲಾಯಿಸಿದ್ದಾರೆ ಎಂದು ಹೇಳಿದರು.
ಅಸಮಾಧಾನ ಇದ್ದಿದ್ದರೆ ಈಶ್ವರಪ್ಪನವರು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಬಹುದಿತ್ತು. ಮುಖ್ಯಮಂತ್ರಿ ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಅವರು ಎಲ್ಲ ಶಾಸಕರ ಹಿತವನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ ಹೆಬ್ಬಾರ್, ಬಸವನಗೌಡ ಯತ್ನಾಳ್ ಅವರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಇತ್ತೀಚೆಗೆ ನೀಡಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಬ್ಬಾರ್, ಯತ್ನಾಳ್ ಅವರಿಗೆ ಅನೇಕ ಬಾರಿ ರಾಷ್ಟ್ರೀಯ ನಾಯಕರು ಎಚ್ಚರಿಕೆ ನೀಡಿದ್ದಾರೆ. ಪದೇಪದೆ ಈ ರೀತಿ ಹೇಳಿಕೆ ನೀಡುತ್ತಿದ್ದಲ್ಲಿ ಕಾದು ನೋಡಿ ಎಂಬುದಾಗಿ ಹೇಳಿದರು.