ಸೌಲಭ್ಯ ಸದುಪಯೋಗದಿಂದ ಉತ್ತಮ ಫಲಿತಾಂಶ

blm
Published on

ಶಿರ್ವ: ಇಲ್ಲಿನ ಹಿಂದೂ ಪದವಿ ಪೂರ್ವ ಕಾಲೇಜು ಹಾಗೂ ಜ್ಞಾನ ಚೇತನಾ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಪಿ.ಯು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಹಕಾರಿಯಾಗುವ ಯುವರ್ ಸಕ್ಸಸ್ ಟೂಲ್ ಕಿಟ್ (ಕಾಂಪಿಟೇಟಿವ್ ಸ್ಟಡಿ ಮೆಟಿರೀಯಲ್ಸ್) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

ಕಾಪು ಕ್ಷೇತ್ರದ ಶಾಸಕ ಹಾಗೂ ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಹಿಂದೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಬೇಕಾಗಿತ್ತು. ಆದರೆ ಈಗ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ರೆಡಿಮೇಡ್ ಆಗಿ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಮುಂದಿನ ಶಿಕ್ಷಣ ಪಡೆಯುವಾಗ ಹೆತ್ತವರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ, ಬಿಡುಗಡೆಗೊಳಿಸಿರುವ ಪುಸ್ತಕಗಳು ಅನುಭವಿ ಶಿಕ್ಷಕರಿಂದ ಬರೆಯಲ್ಪಟ್ಟಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉತ್ತಮ ಅಂಕ ಪಡೆಯಲು ಸಹಕಾರಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೂ ಸಹಕಾರಿಯಾಗಲಿದೆ ಎಂದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ.ಸುಬ್ಬಯ್ಯ ಹೆಗ್ಡೆ, ಜ್ಞಾನ ಚೇತನಾ ಟ್ರಸ್ಟ್‌ನ ಅಕಾಡೆಮಿಕ್ ಅಡ್ವೈಸರ್ ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಕ್ ಡೀನ್ ಗುರುಪ್ರಸಾದ್ ಭಟ್, ಟ್ರಸ್ಟಿ ಸತೀಶ್ ಹೆಗ್ಡೆ, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.ಪ್ರಾಂಶುಪಾಲ ಸುಂದರ ಮೇರಾ ಸ್ವಾಗತಿಸಿದರು. ಉಪನ್ಯಾಸಕಿ ಲವೀನಾ ವಂದಿಸಿದರು. ನಿಶಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net