

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಸಮೀಪ ಕಿಲ್ತೋಡಿ ಎಂಬಲ್ಲಿ ನಡೆದಿದೆ.
ಮೂಲತಃ ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮಪ್ಪ ಮೂಲ್ಯ(52)ರವರು ಪತ್ನಿ ಜಯಂತಿ (45) ಎಂಬುವರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಿಮ್ಮಪ್ಪ ಮೂಲ್ಯ ಮಿತ್ತಮಜಲಿನಲ್ಲಿ ಅಂಗಡಿ ಹೊಂದಿದ್ದು, ಪತ್ನಿಯ ಮನೆ ಬಡಗುಂಡಿಯಲ್ಲಿ ವಾಸವಾಗಿದ್ದರು. ಮದುವೆಯಾದ 17 ವರ್ಷದ ಬಳಿಕ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತಕ್ಕೆ ದಿನಾಂಕ ನಿಗದಿಪಡಿಸಿ, ಬಟ್ಟೆ ಬರೆಗಳನ್ನು ಖರೀದಿಸಿ, ಸಭಾಭವನವನ್ನು ಬುಕ್ ವಾಡಲಾಗಿತ್ತು. ದಂಪತಿಯ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು ವಿಕೋಪಕ್ಕೆ ತಿರುಗಿ ಪತಿ ತಿಮ್ಮಪ್ಪ ಮೂಲ್ಯ ಪತ್ನಿಗೆ ಹಲ್ಲೆ ವಾಡಿ ಕತ್ತುಹಿಸುಕಿ ಸಾಯಿಸಿ ಬಳಿಕ ತಾನು ಮನೆಯ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಸಮೀಪದವರು ಬೆಳಗ್ಗೆಯಾದರೂ ಬಾಗಿಲು ತೆರೆಯಲಿಲ್ಲವೇಕೆ ಎಂದು ಸಂಶಯದಿಂದ ಗಮನಿಸಿದಾಗ ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾದರೆ, ತಿಮ್ಮಪ್ಪ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಪೊಲೀಸರ ಗಮನಕ್ಕೆ ತರಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ಜಯಂತಿ ಅವರ ತಂಗಿ ಸುಜಾತಾ, ಮೃತ ತಿಮ್ಮಪ್ಪ ಅವರ ಅಣ್ಣ ವಿಶ್ವನಾಥ ಸಜೀಪ ಮೂಡ ಅವರ ದೂರಿನ ಮೇರೆಗೆ ಬಂಟ್ವಾಳ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ವಿಜಯ ಪ್ರಸಾದ್, ಇನ್‌ಸ್ಪೆಕ್ಟರ್ ಶಿವಕುವಾರ್, ಎಸ್ಸೈ ಕಲೈವಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.