ಕರಕೌಶಲದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ : ಜ್ಯೋತಿರಾಜ್ ಹೇಳಿಕೆ

New Project (25)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕರಕೌಶಲದಿಂದ ತಯಾರಾಗುವ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಉತ್ತಮ ಮಾರುಕಟ್ಟೆಯೂ ಲಭಿಸುತ್ತದೆ. ಹೊಲಿಗೆ ಜತೆಗೆ ಗೊಂಡೆ ತಯಾರಿ, ಎಂಬ್ರಾಯಿಡರಿ ಕಲಿತರೆ ಉತ್ತಮ ಆದಾಯ ಗಳಿಸಬಹುದು. ಈ ಉದ್ಯಮ ಸ್ಥಾಪನೆಗೆ ಪಿ.ಎಂ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಹೇಳಿದರು.

ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಬ್ಯಾಂಕ್ ಆಫ್ ಬರೋಡ ಸಹಭಾಗಿತ್ವದೊಂದಿಗೆ ಮೂಡುಬಿದಿರೆ ವಿಶ್ವಕರ್ಮ ಸಭಾಭವನದಲ್ಲಿ ಏಳು ದಿನ ನಡೆಯುವ ಸೀರೆಗೆ ಗೊಂಡೆ ಹಾಕುವ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಮಾತನಾಡಿ, ವಿಶ್ವಕರ್ಮರಿಗೆ ಕೌಶಲ ದೇವರು ಕೊಟ್ಟ ವರ. ಅದನ್ನು ಸದ್ಭಳಕೆ ಮಾಡಿ. ತರಬೇತಿ ಪಡೆದರೆ ಸಾಲದು, ಅದನ್ನು ಉದ್ಯೋಗವಾಗಿ ಮುಂದುವರಿಸಿ ಎಂದರು.

ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ, ಯೋಗೀಶ್ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ ಆಚಾರ್ಯ ಶುಭ ಹಾರೈಸಿದರು. ವಿಚೀಸ್ ಕೌಶಲಪರ ತರಬೇತಿ ಕೇಂದ್ರ ನಿರ್ದೇಶಕಿ ಶುಭಲಕ್ಷ್ಮೀ ಪ್ರವೀಣ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸುರೇಶ್ ವಂದಿಸಿದರು. ರಶ್ಮಿತಾ ಅರವಿಂದ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net