

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ಹಳೆಯಂಗಡಿ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಮಂಗಳವಾರ ನಡೆಯಿತು. ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಆರಂಭದಲ್ಲಿ ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕೊಳಚೆ ನೀರು ರಸ್ತೆಗೆ: ಹಳೆಯಂಗಡಿ ಜಂಕ್ಷನ್ ಬಳಿಯ ಖಾಸಗಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಾತ್ರೋರಾತ್ರಿ ರಸ್ತೆಗೆ ಬಿಡುತ್ತಿದ್ದು ಪರಿಸರದಲ್ಲಿ ರೋಗದ ಭೀತಿ ಎದುರಾಗಿದೆ. ಈ ನಡುವೆ ತ್ಯಾಜ್ಯ ನೀರು ಬಿಡಲು ಕಟ್ಟಡದ ಮಾಲೀಕರು ನದಿ ಬದಿವರೆಗೆ ಕೊಳವೆ ಅಳವಡಿಸಿದ್ದು ನದಿ ನೀರು ಮಲಿನವಾಗಲಿದೆ. ಕೂಡಲೇ ಅಳವಡಿಸಿದ ಕೊಳವೆ ಪೈಪ್ ತೆರವುಗೊಳಿಸಬೇಕು ಹಾಗೂ ತ್ಯಾಜ್ಯ ನೀರು ರಸ್ತೆಗೆ ಬಿಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆಗೆ ಸಿದ್ಧ ಎಂದು ಪ್ರವೀಣ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಗ್ರಾಮಸ್ಥರು ಬೆಂಬಲ ಸೂಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆಗ ಪಂಚಾಯಿತಿ ಪ್ರಭಾರ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಗ್ರಾಮಸ್ಥರನ್ನು ಸಮಾಧಾನಪಡಿಸಿ ಬಹುಮಹಡಿ ಕಟ್ಟಡದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಅನಧಿಕೃತ ಮೀನು ಮಾರಾಟ
ಹಳೆಯಂಗಡಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೆಲವರು ಅನಧಿಕೃತವಾಗಿ ಮೀನು ಮಾರಾಟ ನಡೆಸುತ್ತಿದ್ದು, ಈ ಬಗ್ಗೆ ಪಂಚಾಯಿತಿ ಹಾಗೂ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಎಂದು ಗ್ರಾಮಸ್ಥ ಸದಾಶಿವ ಚಿಲಿಂಬಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಉತ್ತರಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಮಾರುಕಟ್ಟೆ ಇದ್ದರೂ ಹೆದ್ದಾರಿ ಬದಿ ಅನಧಿಕೃತವಾಗಿ ಮೀನು ಮಾರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೂಲ್ಕಿ ಪೊಲೀಸ್ ಠಾಣೆಯ ಎಎಸ್‌ಐ ಸುರೇಶ್, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಮಸಭೆಗೆ ಟ್ರಾಫಿಕ್ ಪೊಲೀಸರು ಬರುವುದಿಲ್ಲ ಯಾಕೆ? ಹಳೆಯಂಗಡಿ, ಪಾವಂಜೆ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಅಪಘಾತ ವಲಯವಾಗಿ ಪರಿಣಮಿಸಿದ್ದು ಟ್ರಾಫಿಕ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಮನೋಜ್ ಒತ್ತಾಯಿಸಿದರು.
ಉಪ್ಪು ನೀರು ಹಾವಳಿ
ಸಸಿಹಿತ್ಲು ಪ್ರದೇಶದಲ್ಲಿ ಉಪ್ಪು ನೀರು ಹಾವಳಿಯಿಂದ ಕೃಷಿ ಹಾನಿಯಾಗಿದ್ದು ಯಾವುದೇ ಪರಿಹಾರ ದೊರೆತಿಲ್ಲ ಎಂದು ಪಂಚಾಯಿತಿ ಸದಸ್ಯ ಧನರಾಜ್ ಕೋಟ್ಯಾನ್ ಕೃಷಿ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನೋಡಲ್ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಿಕಾ, ಪ್ರಭಾರ ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಲೆಕ್ಕಿಗ ಕೇಶವ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
ಮನೆಗಳಿಗೆ ಕುಸಿತ ಭೀತಿ
ಹಳೆಯಂಗಡಿಯ ಪ್ರತಿಷ್ಠಿತ ಯುಬಿಎಂಸಿ ಶಾಲೆ ಮುಚ್ಚಿ ಹಳೇ ವಿದ್ಯಾರ್ಥಿಗಳು ದಾಖಲೆಗಾಗಿ ಪರದಾಡುತ್ತಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪಡುಪಣಂಬೂರು ಉರ್ದು ಶಾಲೆಯ ಶೌಚಗೃಹಕ್ಕೆ ಮೆಶ್ ವ್ಯವಸ್ಥೆ, ಕದಿಕೆ ಸೇತುವೆ, ಹಳೆಯಂಗಡಿ ಇಂದಿರಾ ನಗರದ ನೀರಿನ ಟ್ಯಾಂಕ್ ಬಳಿ ತಡೆಗೋಡೆ ಇಲ್ಲದೆ ಹಿಂದುಳಿದ ವರ್ಗದವರ ಮೂರು ಮನೆಗಳು ಕುಸಿತದ ಭೀತಿಯಲ್ಲಿದ್ದು ಕೂಡಲೇ ದುರಸ್ತಿಪಡಿಸಬೇಕು ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿ ಬಂದವು.
ಅನ್ಯರಾಜ್ಯ ಕಾರ್ಮಿಕರ ಹಾವಳಿ
ಪಂಚಾಯಿತಿ ವ್ಯಾಪ್ತಿಯ ಜೆಜೆಎಂ ಹೊಸ ನೀರಿನ ಟ್ಯಾಂಕ್ ಸ್ವಚ್ಛ ಮಾಡಬೇಕು. ಭಾಗ್ಯಲಕ್ಷ್ಮೀ ಬಾಂಡ್ ಫಲಾನುಭವಿಗಳ ಬಗ್ಗೆ ವಿವರಣೆ ಬೇಕು. ಕೊಳುವೈಲು ರಸ್ತೆಯ ಪಡುಹಿತ್ಲು ಅಪಾಯಕಾರಿ ತಿರುವಿನಲ್ಲಿರುವ ಕೆರೆ ಬಳಿ ಪ್ರಾಣ ಹಾನಿಯಾಗಿದ್ದು ತಡೆಬೇಲಿ ನಿರ್ಮಾಣವಾಗಬೇಕು. ಹಳೆಯಂಗಡಿ ಪರಿಸರದಲ್ಲಿ ಅನೈತಿಕ ಚಟುವಟಿಕೆ ನಿಯಂತ್ರಿಸಬೇಕು. ಕೊಳುವೈಲು ಪ್ರದೇಶದಲ್ಲಿ ಅನ್ಯ ರಾಜ್ಯ ಕಾರ್ಮಿಕರ ಹಾವಳಿ ಇದ್ದು ಗುರುತು ಚೀಟಿ ಪರಿಶೀಲನೆ ನಡೆಸಲು ಪೊಲೀಸರು ಬೀಟ್ ವ್ಯವಸ್ಥೆ ಬಲಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.