ಸಿದ್ದಾಪುರ: ಗೋಳಿಯಂಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1963ರಲ್ಲಿ ಆರಂಭಗೊಂಡಿದ್ದು, ಡಿ.27ರಂದು ಪ್ರಥಮ ಬಾರಿ ಶಾಲಾ ವಾರ್ಷಿಕೋತ್ಸವ ದಿಬ್ಬಣ ಸಂಭ್ರಮಾಚರಣೆಗೆ ಸಜ್ಜುಗೊಂಡಿದೆ.
1963ರ ನ.27ರಂದು ಗೋಳಿಯಂಗಡಿ ಪೇಟೆಯ ವೈದ್ಯರ ಅಂಗಡಿ ಬಳಿಯ ಸಣ್ಣ ಕಟ್ಟಡದಲ್ಲಿ ಶಾಲೆ ಆರಂಭಗೊಂಡಿತು. 4 ವರ್ಷಗಳ ಬಳಿಕ ಪೇಟೆಯಿಂದ ಬೈಂದೂರು-ವಿರಾಜಪೇಟೆಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಗೋಳಿಜೆಡ್ಡು ಎಂಬಲ್ಲಿ ಎರಡು ಕೊಠಡಿಗಳ ಕಟ್ಟಡದಲ್ಲಿ ಸ್ವಂತ ನೆಲೆಕಂಡಿತು. ಮಕ್ಕಳ ದಾಖಾಲಾತಿ ಪ್ರಮಾಣ ಏರಿಕೆಯಾಗುತ್ತಿದ್ದಂತೆ ತರಗತಿ ಕೊಠಡಿಗಳ ಸಂಖ್ಯೆ 5ಕ್ಕೆ ಏರಿಕೆಯಾಯಿತು. ಪ್ರಸ್ತುತ ಶಾಲೆಯಲ್ಲಿ 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ ಪ್ರತಿವರ್ಷ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ಕೊಡುಗೆ ನೀಡುತ್ತಿದ್ದಾರೆ. ಮುಸ್ತಾಕ್ ಅಹಮ್ಮದ್ ಬೆಳ್ವೆ ಪ್ರಾಯೋಜಕತ್ವದಲ್ಲಿ ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಮಕ್ಕಳಿಗೆ ಐಡಿ ಕಾರ್ಡ್, ಯಳಂತೂರು ದೀಪಾ ಶೆಟ್ಟಿ ಪ್ರಿಂಟರ್, ಉದ್ಯಮಿ ರಾಜೀವ ಶಿರೂರು ಮಕ್ಕಳಿಗೆ ಟ್ರಾೃಕ್ ಶೂಟ್ ನೀಡಿದ್ದಾರೆ.
ಡಿ.27ರಂದು ಬೆಳಗ್ಗೆ 9 ಗಂಟೆಗೆ ಬೆಳ್ವೆ ಗ್ರಾಪಂ ಅಧ್ಯಕ್ಷೆ ರಾಧಾ ಧ್ವಜಾರೋಹಣಗೈಯಲಿದ್ದಾರೆ. ಸಂಜೆ 7.30ರಿಂದ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಉದ್ಘಾಟನೆ ನಡೆಯಲಿದೆ. ಸಂಜೆ 7ರಿಂದ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ರಾತ್ರಿ 8.30ರಿಂದ ಶಾಲಾ ಮಕ್ಕಳು, ಹಳೇ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ, ಪ್ರಹಸನ, ಮನೋರಂಜನಾ ಕಾರ್ಯಕ್ರಮಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಭಗತ್‌ಸಿಂಗ್ ನಾಟಕ, ಹಳೇ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಯಕ್ಷಗಾನ ನಡೆಯಲಿದೆ.
ಸೌಲಭ್ಯಗಳ ಕೊರತೆ
ಶಾಲೆಗೆ ಆವರಣಗೋಡೆ, ಕಟ್ಟಡದ 3 ತರಗತಿಗಳಿಗೆ ಮೇಲ್ಛಾವಣಿ, ರಂಗಮಂದಿರ, ಪೀಠೋಪಕರಣಗಳು, ಸ್ಮಾರ್ಟ್‌ಕ್ಲಾಸ್, ಪ್ರಾಜೆಕ್ಟರ್, ಗ್ರಂಥಾಲಯ ಸೇರಿ ಇನ್ನಿತರ ಸೌಲಭ್ಯಗಳ ಅವಶ್ಯಕತೆಯಿದೆ.