ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್!

toilte
Published on

ಮಾಸ್ಕೋ: ಸರ್ಕಾರಿ ಅಧಿಕಾರಿಗಳೆಂದರೆ ಲಂಚ ಪಡೆದೇ ಪಡೆಯುತ್ತಾರೆ ಎನ್ನುವ ಹಣೆಪಟ್ಟಿ ಒಂದು ಮೊದಲಿನಿಂದಲೂ ಬಂದುಬಿಟ್ಟಿದೆ. ಆದರೆ ಕೆಲವು ಅಧಿಕಾರಿಗಳಂತೂ ನಾವು ಊಹಿಸಲೂ ಅಸಾಧ್ಯವೆನಿಸುವಷ್ಟು ಲಂಚ ಪಡೆದುಕೊಂಡು ಅದ್ಧೂರಿ ಜೀವನ ನಡೆಸುವವರೂ ಇದ್ದಾರೆ. ಅದೇ ರೀತಿ ಲಂಚದ ಹಣದಿಂದ ಜೀವನ ನಡೆಸುತ್ತಿದ್ದ ಅಧಿಕಾರಿಯೊಬ್ಬ ಇದೀಗ ತನಿಖಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ರಷ್ಯಾದ ಟ್ರಾಫಿಕ್ ಪೊಲೀಸ್ ಆಗಿರುವ ಅಲೆಕ್ಸಿ ಸಫೊನೊವ್ ಸಿಕ್ಕಿಬಿದ್ದಿರುವ ಅಧಿಕಾರಿ. ಈತ ತನ್ನ ಕೆಲ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು, ಕ್ರಿಮಿನಲ್ ಗ್ಯಾಂಗ್​ಗಳ ಬೆಂಬಲಕ್ಕೆ ನಿಂತಿದ್ದನಂತೆ. ಯಾವುದೇ ಕ್ರಿಮಿನಲ್ ಕೆಲಸ ಮಾಡಿಕೊಂಡು ಹೋಗುತ್ತಿದ್ದರೂ ಅವರನ್ನು ಹಿಡಿಯುತ್ತಿರಲಿಲ್ಲವಂತೆ. ಚೆಕ್​ಪೋಸ್ಟ್​ಗಳಲ್ಲಿ ಅವರ ಗಾಡಿಗಳನ್ನು ಚೆಕ್ ಮಾಡದೆ ಹಾಗೇ ಕಳುಹಿಸಲಾಗುತ್ತಿತ್ತಂತೆ. ಅದಕ್ಕೆಂದು ಆತ ಬರೋಬ್ಬರಿ 1.91 ಕೋಟಿ ರೂಪಾಯಿ ಲಂಚ ಪಡೆದಿದ್ದನಂತೆ.

ಹೀಗೆ ಅಧಿಕಾರದಲ್ಲಿ ಸಾಕಷ್ಟು ಲಂಚ ಪಡೆದಿದ್ದ ಆತ ಅದ್ಧೂರಿ ಮನೆ ಕಟ್ಟಿಕೊಂಡು ಅದರಲ್ಲಿ ಜೀವಿಸುತ್ತಿದ್ದ. ರಾಜನ ಅರಮನೆಯಂತಹ ಮನೆಯಲ್ಲಿ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಲಾಗಿತ್ತು. ವಿಶೇಷವೆಂದರೆ ಆತನ ಮನೆಯಲ್ಲಿ ಚಿನ್ನದ ಟಾಯ್ಲೆಟ್ ಬಳಕೆ ಮಾಡಲಾಗುತ್ತಿತ್ತಂತೆ. ಲಂಚದ ವಿಚಾರದಲ್ಲಿ ಇತ್ತೀಚೆಗೆ ಹತ್ತಾರು ಅಧಿಕಾರಿಗಳ ಮನೆಯ ಮೇಲೆ ರಷ್ಯಾದ ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ವೇಳೆ ಈ ಅಧಿಕಾರಿಯ ಐಷಾರಾಮಿ ಜೀವನದ ವಿಚಾರ ಹೊರಬಿದ್ದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net