

Gold Reserves: ಖನಿಜ ಪರಿಶೋಧನೆಯ ಸಮಯದಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಒಡಿಶಾದಲ್ಲಿ ಚಿನ್ನದ ಗಣಿಗಳನ್ನು ಪತ್ತೆಹಚ್ಚಿದೆ. ವಿಜ್ಞಾನಿಗಳು ರಾಜ್ಯದಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪಗಳನ್ನು ಕಂಡುಹಿಡಿದಿದ್ದಾರೆ. ಇತ್ತೀಚೆಗೆ, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ತನ್ನ ಹುಡುಕಾಟದಲ್ಲಿ ಈ ಪ್ರದೇಶಗಳನ್ನು ಗುರುತಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಗಣಿಗಾರಿಕೆ ಮತ್ತು ಹರಾಜು ಯೋಜನೆಗಳ ಬಗ್ಗೆ ಆಸಕ್ತಿ ಇನ್ನಷ್ಟು ವೇಗದಲ್ಲಿ ಸಾಗುತ್ತಿದೆ.
'ಮನಿ ಕಂಟ್ರೋಲ್' ವರದಿ ಪ್ರಕಾರ, ಈ ಚಿನ್ನದ ನಿಕ್ಷೇಪಗಳ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಭೂವೈಜ್ಞಾನಿಕ ಸೂಚನೆಗಳ ಆಧಾರದ ಮೇಲೆ, ಚಿನ್ನದ ಮೀಸಲು ಸುಮಾರು 10ರಿಂದ 20 ಮೆಟ್ರಿಕ್ ಟನ್‌ಗಳ ನಡುವೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ದೊಡ್ಡ ಮೊತ್ತವಾಗಿದ್ದರೂ, ಭಾರತ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣಕ್ಕೆ ಹೋಲಿಸಿದರೆ ಚಿಕ್ಕದಾಗಿದೆ.
ಭಾರತ ಕಳೆದ ವರ್ಷ ಸುಮಾರು 700ರಿಂದ 800 ಮೆಟ್ರಿಕ್ ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. 2020ರಲ್ಲಿ ದೇಶೀಯ ಉತ್ಪಾದನೆ ಕೇವಲ 1.6 ಟನ್‌ಗಳಷ್ಟಿತ್ತು. ಒಡಿಶಾ ಸರ್ಕಾರ, ಒಡಿಶಾ ಮೈನಿಂಗ್ ಕಾರ್ಪೊರೇಷನ್ (ಒಎಂಸಿ) ಮತ್ತು ಭಾರತದ ಭೂವೈಜ್ಞಾನಿಕ ಸಮೀಕ್ಷೆ ಒಟ್ಟಾಗಿ ಚಿನ್ನದ ಗಣಿಗಳ ಗುರುತಿಸುವಿಕೆಯನ್ನು ವಾಣಿಜ್ಯೀಕರಿಸಲು ಮುಂದಾಗಿವೆ.
ದೇವಗಢದಲ್ಲಿ ಮೊದಲ ಗಣಿಗಾರಿಕೆ ಬ್ಲಾಕ್ ಹರಾಜನ್ನು ನಡೆಸಲು ಯೋಜನೆಗಳು ನಡೆಯುತ್ತಿವೆ. ಇದು ರಾಜ್ಯದ ಖನಿಜ ವಲಯಕ್ಕೆ ಒಂದು ಮೈಲಿಗಲ್ಲು ಎನ್ನಲಾಗಿದೆ. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಈಗಾಗಲೇ G3 ಮಟ್ಟದಿಂದ G2 (ಮಾದರಿ ಮತ್ತು ಕೊರೆಯುವಿಕೆ) ಮಟ್ಟಕ್ಕೆ ಪರಿಶೋಧನೆಯನ್ನು ಹೆಚ್ಚಿಸುತ್ತಿದೆ. ಅಡಸಾ-ರಾಂಪಲ್ಲಿ ಮತ್ತು ಗೋಪುರ್-ಗಾಜಿಪುರ ಪ್ರದೇಶಗಳಲ್ಲಿ ಪರಿಶೋಧನೆ ನಡೆಯುತ್ತಿದೆ.
ಹೊಸದಾಗಿ ಪತ್ತೆಯಾದ ಚಿನ್ನದ ನಿಕ್ಷೇಪಗಳು ಪ್ರಾದೇಶಿಕ ಅಭಿವೃದ್ಧಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಮೂಲಸೌಕರ್ಯ ಹೂಡಿಕೆಗಳು, ಉದ್ಯೋಗಗಳು, ಸಾರಿಗೆ ಮತ್ತು ಸ್ಥಳೀಯ ಸೇವೆಗಳು ಹೆಚ್ಚಾಗುತ್ತವೆ. ಒಡಿಶಾ ಈಗಾಗಲೇ ಭಾರತದ ಶೇ.96ರಷ್ಟು ಕ್ರೋಮೈಟ್ ಖನಿಜ ನಿಕ್ಷೇಪಗಳು, ಶೇ.52ರಷ್ಟು ಬಾಕ್ಸೈಟ್ ಮತ್ತು ಶೇ.33ರಷ್ಟು ಕಬ್ಬಿಣದ ಅದಿರನ್ನು ಹೊಂದಿದೆ.
ವಾಣಿಜ್ಯ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ತಾಂತ್ರಿಕ ಸಮಿತಿಗಳನ್ನು ರಚಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ. MMDR ಕಾಯ್ದೆಯ ಪ್ರಕಾರ, ಗಣಿಗಾರಿಕೆ ಬ್ಲಾಕ್ ಹರಾಜನ್ನು ನಡೆಸಲಿದೆ. ಪರಿಸರ ಮತ್ತು ಸಾಮಾಜಿಕ ಪರಿಣಾಮದ ಮೌಲ್ಯಮಾಪನಗಳನ್ನು ನಡೆಸಲಾಗುವುದು. ಗಣಿಗಾರಿಕೆ ಕಾರ್ಯಾಚರಣೆಯ ನೆಪದಲ್ಲಿ ರಸ್ತೆಗಳು, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು,(ಏಜೆನ್ಸೀಸ್).