97,000 ರೂ. ಗಡಿಯಲ್ಲಿ ಚಿನ್ನ! ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯಲಿದ್ಯಾ ಬೆಲೆ? ಹೀಗಿದೆ ತಜ್ಞರ ಮಾತು | Gold

ವಿಜಯವಾಣಿ - 2025-06-29T155422.556
Published on

Gold Rate: 1 ಲಕ್ಷ ರೂ. ಗಡಿದಾಟಿ ಹೋಗಿದ್ದ ಚಿನ್ನದ ಬೆಲೆ ಇದೀಗ ಮಂದಗತಿಯಲ್ಲಿ ಇಳಿಕೆ ಕಾಣುತ್ತಿರುವುದು ಚಿನ್ನದ ಗ್ರಾಹಕರಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಒಂದು ವಾರಕ್ಕೂ ಮೊದಲು ದಾಖಲೆ ಮಟ್ಟ ತಲುಪಿದ್ದ ಚಿನ್ನ ಇದೀಗ ಕ್ರಮೇಣವಾಗಿ ಕುಸಿಯುತ್ತಿರುವುದು ಮದುವೆ ಸೀಸನ್​​ ಬಿಜಿಯಲ್ಲಿರುವ ಗ್ರಾಹಕರನ್ನು ಖರೀದಿಯತ್ತ ಕೈಬೀಸಿ ಕರೆಯುತ್ತಿದೆ. ಪ್ರಸ್ತುತ 97,000 ರೂ.ಗೆ ಬಂದು ನಿಂತಿರುವ ಚಿನ್ನ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಅಸಲಿಗೆ ಇದು ನಿಜವೇ? ಈ ಬಗ್ಗೆ ತಜ್ಞರು ಅಚ್ಚರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ದಾಖಲಾದ ಬೆಲೆಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97 ಸಾವಿರ ರೂ.ಗೆ ತಲುಪಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 89 ಸಾವಿರ ರೂ.ಗೆ ಬಂದಿಳಿದಿದೆ. ಜಾಗತಿಕ ಅನಿಶ್ಚಿತತೆಯ ಮಧ್ಯೆಯೂ ಚಿನ್ನದ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಟೈಟಾನ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಆದಾಗ್ಯೂ, ಅಮೆರಿಕ ಮತ್ತು ಚೀನಾ ವ್ಯಾಪಾರ ಒಪ್ಪಂದದಿಂದಾಗಿ, ಸುರಕ್ಷಿತ ಆಸ್ತಿ ಎಂದು ಪರಿಗಣಿಸಲಾದ ಚಿನ್ನದ ಮೇಲಿನ ಹೂಡಿಕೆಗಳು ಕಡಿಮೆಯಾಗಿವೆ ಮತ್ತು ಕೆಲವು ದಿನಗಳಿಂದ ಇಳಿಕೆಯತ್ತ ಮುಖಮಾಡಿದೆ.

ಚೀನಾ ಜೊತೆಗಿನ ಅಮೆರಿಕಾದ ಸಂಬಂಧಗಳು ಸುಧಾರಣೆ ಕಾಣುತ್ತಿರುವುದು ಮತ್ತು ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಬೆಳವಣಿಗೆ ಅಂತಾರಾಷ್ಟ್ರೀಯ ಉದ್ವಿಗ್ನತೆಗಳು ದಿನ ಕಳೆದಂತೆ ಕಡಿಮೆಗೊಳಿಸಿದೆ. ಇದು ಹೂಡಿಕೆದಾರರಿಗೆ ಲಾಭ ಪಡೆಯಲು ಅವಕಾಶವನ್ನು ಒದಗಿಸಿದೆ ಎಂದು ಆರ್‌ಜೆಒ ಫ್ಯೂಚರ್ಸ್‌ನ ಹಿರಿಯ ಮಾರುಕಟ್ಟೆ ತಂತ್ರಜ್ಞ ಡೇನಿಯಲ್ ಪಾವಿಲೋನಿಸ್ ಹೇಳಿದ್ದಾರೆ.

2025ರಲ್ಲಿ ಫೆಡರಲ್ ರಿಸರ್ವ್ ಅಲ್ಪಾವಧಿಯ ಸಾಲ ವೆಚ್ಚವನ್ನು 75 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸುತ್ತದೆ ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದಾರೆ. ಆದಾಗ್ಯೂ, ಭೌಗೋಳಿಕ ರಾಜಕೀಯ ಅಂಶಗಳಿಂದಾಗಿ ಚಿನ್ನದ ಮೇಲಿನ ಹೂಡಿಕೆಗಳು ಕುಸಿಯುತ್ತಿರುವುದರಿಂದ ಚಿನ್ನದ ಬೆಲೆಗಳಲ್ಲಿನ ಇಳಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ನಿರೀಕ್ಷಿಸುತ್ತಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಗಳು ಈಗಿನಕ್ಕಿಂತ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಊಹಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net