

Donald Trump: ಇರಾನ್ ಮೇಲಿನ 12 ದಿನಗಳ ನಿರಂತರ ವೈಮಾನಿಕ ದಾಳಿಯ ಬಳಿಕ ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಬಂಧ ಹಿಂದಿನಕ್ಕಿಂತ ಮತ್ತಷ್ಟು ಗಟ್ಟಿಯಾಗಿದೆ. ಇತ್ತೀಚೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಬೆಂಜಮಿನ್ ವಿರುದ್ಧ ಭ್ರಷ್ಟಾಚಾರ ಆರೋಪಗಳ ಕುರಿತು ನಡೆಯುತ್ತಿರುವ ತನಿಖೆ ಅರ್ಥಹೀನ ಎಂದು ಕಿಡಿಕಾರಿದ್ದಾರೆ.
ಈ ಕುರಿತಂತೆ ತಮ್ಮ ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್ ಮಾಡಿರುವ ಟ್ರಂಪ್, "ಇಸ್ರೇಲ್ ಪ್ರಧಾನಿ ವಿರುದ್ಧದ ಆರೋಪಗಳು ಭಯಾನಕ" ಎಂದು ಕರೆದಿದ್ದಾರೆ. 2019ರಲ್ಲಿ ಇಸ್ರೇಲ್‌ನಲ್ಲಿ ತಮ್ಮ ವಿರುದ್ಧ ಹೂಡಲಾದ ಲಂಚ, ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣ, ಆರೋಪಗಳನ್ನು ಪ್ರಧಾನಿ ನೆತನ್ಯಾಹು ನಿರಾಕರಿಸಿದ್ದಾರೆ. ಈ ಆರೋಪಗಳ ವಿಚಾರಣೆ 2020ರಲ್ಲಿ ಪ್ರಾರಂಭವಾಗಿದ್ದು, ಇವುಗಳಲ್ಲಿ ಮೂರು ಕ್ರಿಮಿನಲ್ ಪ್ರಕರಣಗಳು ಸೇರಿವೆ.
ಈ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಸಾಕ್ಷ್ಯವನ್ನು ಮುಂದೂಡುವಂತೆ ನೆತನ್ಯಾಹು ನ್ಯಾಯಾಲಯವನ್ನು ಕೋರಿದರು. ಆದರೆ, ಇದಕ್ಕೆ ಒಪ್ಪದ ಕೋರ್ಟ್ ಪ್ರಧಾನಿಗಳ ಮನವಿಯನ್ನು ತಿರಸ್ಕರಿಸಿತು. ಇಸ್ರೇಲ್ ಪ್ರಧಾನಿ ಪರ ಧ್ವನಿ ಎತ್ತಿದ ಟ್ರಂಪ್, "ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮವು ತುಂಬಾ ಕ್ರೂರವಾಗಿದೆ. ಬೆಂಜಮಿನ್ ಒಬ್ಬ ವೀರ. ಇರಾನ್ ಒಡ್ಡಿದ ಪರಮಾಣು ಬೆದರಿಕೆಯನ್ನು ತೊಡೆದುಹಾಕಲು ಅಮೆರಿಕದೊಂದಿಗೆ ಕೆಲಸ ಮಾಡಿದ ಉತ್ತಮ ಪ್ರಧಾನಿ" ಎಂದಿದ್ದಾರೆ.
"ನೆತನ್ಯಾಹು ಅವರು ಪ್ರಸ್ತುತ ಹಮಾಸ್ ಜತೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಮತ್ತು ಒತ್ತೆಯಾಳುಗಳನ್ನು ಹಿಂತಿರುಗಿಸುವ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ದಿನವಿಡೀ ನ್ಯಾಯಾಲಯದ ಕೊಠಡಿಯಲ್ಲಿ ಕೂರುವಂತೆ ಮಾಡುವುದು ಎಷ್ಟು ಸರಿ?, ಇದು ರಾಜಕೀಯ ಬೇಟೆಯೇ ಹೊರತು ಬೇರೇನೂ ಅಲ್ಲ" ಎಂದು ಟ್ರಂಪ್ ಕಿಡಿಕಾರಿದ್ದಾರೆ,(ಏಜೆನ್ಸೀಸ್).