

ನವದೆಹಲಿ: ಊಟವಾದ ಮೇಲೆ ಪಾನ್ ಬೇಕೇಬೇಕು ಎನ್ನುವವರು ಅನೇಕರಿದ್ದಾರೆ. ಆದರೆ ಈ ಪಾನ್ ಅಂಗಡಿಗೆ ಹೋದವರು ಒಂದು ಪಾನ್ಗೆ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟರೂ ಬಿಡಬಹುದು. ಏಕೆಂದರೆ ಇಲ್ಲಿನ ಆ ಒಂದು ಪಾನ್ ಬೆಲೆ ಬರೋಬ್ಬರಿ 600 ರೂಪಾಯಿ!
ಹೌದು! ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂತದ್ದೊಂದು ಪಾನ್ ಕಾರ್ನರ್ ಇದೆ. ಅದರ ಹೆಸರು ಯಮೂಸ್ ಪಂಚಾಯತ್. ಇಲ್ಲಿ ರಫೆಲ್ಲೋ ಗೋಲ್ಡ್ ಪಾನ್ ತುಂಬಾ ವಿಶೇಷವಂತೆ. ಈ ವಿಶೇಷ ಪಾನ್ನ ಬೆಲೆ 600 ರೂಪಾಯಿ. ಅಂದ ಹಾಗೆ ಈ ಪಾನ್ನ ವಿಶೇಷತೆ ಏನು ಎನ್ನುವುದಕ್ಕೆ ಪಾನ್ ಅಂಗಡಿಯವರೇ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಮಾಮೂಲಿ ಪಾನ್ಗಳಂತೆ ಎಲೆಗೆ ಒಂದಿಷ್ಟು ಸುಣ್ಣ, ಫ್ಲೇವರ್ಗಳನ್ನು ಹಾಕಲಾಗುತ್ತದೆ. ಅದಕ್ಕೆ ಒಂದಿಷ್ಟು ಖರ್ಜೂರದ ಪೇಸ್ಟ್, ಲವಂಗ, ಏಲಕ್ಕಿ ಹೀಗೆ ಅನೇಕ ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ. ಕೊನೆಯಲ್ಲಿ ಎಲೆಯನ್ನು ಸುತ್ತಿ ಅದಕ್ಕೆ ಗೋಲ್ಡ್ ಕಲರ್ ಪೇಪರ್ನ್ನು ಸುತ್ತಲಾಗುತ್ತದೆ. ಅದನ್ನು ಚೆರ್ರಿಯೊಂದಿಗೆ ಸುಂದರಗೊಳಿಸಿ ಸರ್ವ್ ಮಾಡಲಾಗುತ್ತದೆ. ಹಾರ್ಟ್ ಶೇಪ್ನಲ್ಲಿ ಟ್ರೇನಲ್ಲಿತ್ತು ಕೊಡಲಾಗುತ್ತದೆ.
ಈ ವಿಶೇಷ ಪಾನ್ ಮಾಡುವ ವಿಡಿಯೋ ವೈರಲ್ ಆಗಿದೆ. ದುಬಾರಿ ಬೆಲೆಯ ಪಾನ್ ಬಗ್ಗೆ ಹೆಚ್ಚಿನ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಹಣದಲ್ಲಿ ನಾವು ತಿಂಗಳು ಪೂರ್ತಿ ಪಾನ್ ತಿನ್ನಬಹುದು ಎಂದು ಆರೋಪಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)