

ಗೋಕರ್ಣ:ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ವಿಶೇಷ ಸಭೆ ಗುರುವಾರ ಸಮಿತಿ ಅಧ್ಯಕ್ಷ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ವಾರ ಮಂದಿರದಲ್ಲಿನ ನಂದಿಗೃಹ ಮತ್ತಿತರ ಆನುವಂಶೀಯ ಉಪಾಧಿ ನಿರ್ವಹಣೆ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಈ ತ್ವರಿತ ಸಭೆ ಆಯೋಜಿಸಲಾಗಿದೆಯಾಗಿ ತಿಳಿದು ಬಂದಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್,ಭಟ್ಕಳ ಡಿಎಸ್ಪಿ ಮಹೇಶ ಎಂ.ಕೆ.,ಸಮಿತಿ ಕಾರ್ಯದರ್ಶಿ,ಉಪವಿಭಾಗೀಯಾಧಿಕಾರಿ ಕಲ್ಯಾಣಿ ಕಾಂಬ್ಳೆ,ಸ್ಥಳೀಯ ಸದಸ್ಯರಾದ ವೇ.ಮಹಾಬಲ ಉಪಾಧ್ಯ,ವೇ.ಪರಮೇಶ್ವರ ಮಾರ್ಕಾಂಡೆ,ದತ್ತಾತ್ರೇಯ ಹಿರೇಗಂಗೆ ಮತ್ತು ಮುರಳೀಧರ ಪ್ರಭು ಹಾಜರಿದ್ದರು.
ಅತ್ಯಂತ ಖಾಸಗಿಯಾಗಿ ನಡೆದ ಸಭೆಯ ನಿರ್ಣಯದ ಸಂಬಂಧ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಲು ಕಾರ್ಯದರ್ಶಿ ಅವರು ನಿರಾಕರಿಸಿದರು.ಆದರೆ, ಸಭೆಯಲ್ಲಿ ಮಂದಿರದಲ್ಲಿ ವಿವಿಧ ಉಪಾಧಿ ನಿರ್ವಹಿಸುವ ಬಗ್ಗೆ ಈಗಾಗಲೇ ಕೆಲವರು ನ್ಯಾಯಾಲಯದಿಂದ ಆದೇಶ ಪಡೆದಿರುವ ಕುರಿತು ಹಾಗೂ ಈ ಬಗ್ಗೆ ಮುಂದೆ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ವಿಸ್ತೃತವಾಗಿ
ಚರ್ಚೆ ನಡೆಯಿತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಸಭೆಯ ಹಿನ್ನೆಲೆಯಲ್ಲಿ ಮಂದಿರಕ್ಕೆ ಇನಸ್ಪೆಕ್ಟರ್ ಯೋಗೇಶ ಎಂ.ಕೆ. ನೇತೃತ್ವದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಭೇಟಿ:ಸಭೆಯ ತರುವಾಯ ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ಅವರು ಇಲ್ಲಿನ ಪುಣ್ಯಾಶ್ರಮಕ್ಕೆ ಭೇಟಿಯಿತ್ತರು.ಸ್ಥಳೀಯ ಆನುವಂಶೀಯ ಉಪಾಧಿವಂತರ ಮಂಡಳದ ವತಿಯಿಂದ ನ್ಯಾಯಮೂರ್ತಿ ಅವರನ್ನು ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಶಾಲು ಹೊದೆಸಿ ಸ್ಮರಣಿಕೆಯಿತ್ತು ಸನ್ಮಾನಿಸಿದರು.ಪುಣ್ಯಾಶ್ರಮದಲ್ಲಿನ ಶೃಂಗೇರಿ ಶ್ರೀಶಾರದಾ ಪೀಠಾಧಿಪತಿಗಳಾದ ಶ್ರೀವಿಧುಶೇಖರ ಭಾರತೀ ಸಭಾಭವನವನ್ನು ಶ್ರೀಕೃಷ್ಣ ಸಂದರ್ಶಿಸಿದರು.ಮಂಡಳದ ಪ್ರಸನ್ನ ಜೋಗಭಟ್ಟ,ಶಂಕರ ಗೋಪಿ,ಶ್ರೀಮಹಾಬಲೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ ಮತ್ತಿತರರಿದ್ದರು.