ನಾದಸಿರಿ ರಾಗಸಂಗೀತೋತ್ಸವ ಸಂಪನ್ನ

Sirsi-Nadasiri.
Published on

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ ಆಯೋಜಿಸಿದ್ದ ನಾದಸಿರಿ -2024 ರಾಗಸಂಗೀತೋತ್ಸವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಇತ್ತೀಚೆಗೆ ತಾಲೂಕಿನ ಗಿಳಿಗುಂಡಿಯಲ್ಲಿ ನಡೆಯಿತು. ಟ್ರಸ್ಟಿನ ಗೌರವಾಧ್ಯಕ್ಷ ಎಂ.ಕೆ.ಹೆಗಡೆ, ಅಧ್ಯಕ್ಷ ರಾಜಾರಾಮ ಹೆಗಡೆ, ಅಂತಾರಾಷ್ಟ್ರೀಯ ಪ್ರಸಿದ್ದ ಗಾಯಕರಾದ ಪಂ. ಶುಭದಾ ಪರಾಡ್ಕರ್ ಹಾಗೂ ಟ್ರಸ್ಟ ಇತರ ಸದಸ್ಯರು ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆರಂಭದಲ್ಲಿ ಸಂಗೀತಾ ಹೆಗಡೆಯವರು ರಾಗ್ ತೋಡಿಯನ್ನು ಪ್ರಸ್ತುತ ಪಡಿಸಿದರು. ಇವರೊಂದಿಗೆ ಸಹ ಕಲಾವಿದರಾಗಿ ತಬಲದಲ್ಲಿ ಕೇಶವ ಜೋಶಿ ಹಾಗೂ ಸಂವಾದಿನಿಯಲ್ಲಿ ಸತೀಶ್ ಭಟ್ ಹೆಗ್ಗಾರ ಸಹಕರಿಸಿದರು. ಮುಂಬೈಯ ಪ್ರಸಿದ್ಧ ಗಾಯಕರಾದ ಪಂ. ಶುಭದಾ ಪರಾಡ್ಕರ್ ಕೋಮ ರಿಷಭ ಅಸಾವರಿ, ಆನಂದ ಭಟಿಯಾರ್, ಗ್ವಾಲಿಯರ್ ಶೈಲಿಯ ಟಪ್ ಖ್ಯಾಲ್ ಪ್ರಕಾರದ ಬಂದೀಶನ್ನು ರಾಗ ಅಲೆಯ್ಯಾ ಬಿಲಾವಲ್‌ದಲ್ಲಿ ಹಾಡಿದರು. ಕಿರಣಾ ಗ್ವಾಲಿಯರ್ ಘರಾಣೆಯ ಗಾಯಕರಾದ ಪಂ.ಎA. ವೆಂಕಟೇಶ್ ಕುಮಾರ್ ಅವರು ರಾಗ ಜಾನ್ ಪುರಿ, ರಾಗ ಬೃಂದಾವನಿಸಾರಂಗ ಮತ್ತು ರಾಗ್ ಪಟದೀಪ್‌ನ್ನು ಹಾಡಿ ನಂತರ ವಚನ ಮತ್ತು ದಾಸರ ಪದವನ್ನು ಪ್ರಸ್ತುತಪಡಿಸಿದರು.
ಮಧ್ಯಾಹ್ನ ಗೋವಾದ ಡಾ. ಶಶಾಂಕ್ ಮುಕ್ತೇಧಾರ್ ಅವರು ರಾಗ ಮುಲ್ತಾನಿ, ತಬಲಾ ದಿಗ್ಗಜರೆನಿಸಿಕೊಂಡಿರುವ ಪಂ. ಯೋಗೇಶ್ ಸಂ.ಶಿ ಇವರಿಂದ ತಬಲಾ ಕಾರ್ಯಕ್ರಮ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ಡಾ. ಅಶ್ವಿನಿ ಬಿಡೆ ದೇಶಪಾಂಡೆ ಇವರು ರಾಗ್ ಖೇಮ್ ಕಲ್ಯಾಣ್ ಹಾಗೂ ಕಾಫಿ ಕಾನ್ಹಾಡಾ ಹಾಗೂ ಬಿಹಾಗಡಾ ರಾಗವನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಪಂ. ಉಲ್ಲಾಸ್ ಕಶಾಲ್ಕರ್ ಇವರಿಂದ ಗಾಯನ ಕಾರ್ಯಕ್ರಮವು ನಡೆಯಿತು. ಈ ಸಂಗೀತ ಸಮ್ಮೇಳನದಲ್ಲಿ ತಬಲಾ ಸಾಥಿ ಕಲಾವಿದರಾಗಿ ಶ್ರೀಯತಿ ಭಾಗ್ವತ್ ಮುಂಬೈ, ಕೇಶವ್ ಜೋಶಿಯವರು ಸಹಕರಿಸಿದರು. ಭರತ್ ಹೆಗಡೆ ಹೆಬ್ಬಲಸು, ಸತೀಶ್ ಭಟ್, ಹೆಗ್ಗಾರ್ ಹಾಗೂ ಗುರುಪ್ರಸಾದ್ ಹೆಗಡೆಯವರು ಸಂವಾದಿನಿಯಲ್ಲಿ ಸಹಕರಿಸಿದರು. ತೇಜಸ್ವಿ ಶಂಕರ್ ಹಾಗೂ ವಸುಧಾ ಮುದಿಗೌಡರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net