

ಬೆಂಗಳೂರು: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಇದೀಗ ಕರ್ನಾಟಕವೂ ಅಧಿಕೃತವಾಗಿ ಸೇರಿಕೊಂಡಿದ್ದು, ಸರ್ಕಾರವು ಇಂದು ಈಶ ಔಟ್ರೀಚ್ ಜತೆ ಒಡಂಬಡಿಕೆಗೆ ಸಹಿ ಹಾಕಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಕೆ. ಸುಧಾಕರ್, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಸದ್ಗುರು ಜೊತೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.
ಮಣ್ಣಿನ ಪ್ರಕಾರ, ಅಕ್ಷಾಂಶ ಸ್ಥಾನಗಳು ಮತ್ತು ನಿರ್ದಿಷ್ಟ ರಾಷ್ಟ್ರದ ಕೃಷಿ ಸಂಪ್ರದಾಯಗಳ ಆಧಾರದ ಮೇಲೆ ಸರ್ಕಾರಗಳು ಕಾರ್ಯರೂಪಕ್ಕೆ ತರಬಹುದಾದ ಪ್ರಾಯೋಗಿಕ, ವೈಜ್ಞಾನಿಕ ಪರಿಹಾರಗಳನ್ನು ನೀಡುವ ಮಣ್ಣಿನ ಕಾರ್ಯನೀತಿ ಕೈಪಿಡಿಯನ್ನು ಸಹ ಸದ್ಗುರು ಮುಖ್ಯಮಂತ್ರಿಗೆ ನೀಡಿದರು. ಈ ಅಭಿಯಾನಕ್ಕೆ ಕರ್ನಾಟಕದ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಸದ್ಗುರು ಅವರ ಪ್ರಯಾಣದ ಬಗ್ಗೆ ಹೇಳುವುದಾದರೆ, ಇದು ಭೂಮಿ ತಾಯಿಯನ್ನು ರಕ್ಷಿಸಿದ ಒಂದು ಅದ್ಭುತ ಕಾರ್ಯ ಎಂಬುದಾಗಿ ಇತಿಹಾಸದಲ್ಲಿ ಬರೆಯಲ್ಪಡುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಈ ಅಭಿಯಾನ ಯಶಸ್ವಿಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು, ಇದು ನಡೆಯದಿದ್ದರೆ ಪ್ರಸ್ತುತ ಪೀಳಿಗೆಯನ್ನು ಭವಿಷ್ಯದ ಪೀಳಿಗೆಗಳ ಆಹಾರವನ್ನು ಕದಿಯುತ್ತಿರುವ ಅಪರಾಧಿಗಳೆಂದು ಕರೆಯಲಾಗುವುದು ಎಂದು ಎಚ್ಚರಿಸಿದರು. ಈ ಭೂಮಿಯ ಮೇಲಿನ ಪ್ರತಿಯೊಬ್ಬ ನಾಗರಿಕ ಮಾತ್ರವಲ್ಲ, ಇದು ನಮ್ಮ ಭವಿಷ್ಯವಾದ ನವಜಾತ ಮಕ್ಕಳಿಗೂ ಮತ್ತು ಮುಂದೆ ಹುಟ್ಟಲಿರುವ ಮಕ್ಕಳಿಗೂ ಯಶಸ್ವಿಯಾಗಬೇಕು ಎಂದರು.
ಒಂದು ಸರ್ಕಾರವಾಗಿ, ನಾವು ಕೇವಲ ಎಂಒಯುಗೆ ಸಹಿ ಹಾಕುವುದಷ್ಟೇ ಅಲ್ಲದೆ, ಮಣ್ಣು ಉಳಿಸಲು ಬೇಕಾದ ಎಲ್ಲ ಕಾರ್ಯಗಳನ್ನೂ ಮಾಡುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿಯವರು ಹೇಳಿದರು. ‘ಪರಿಸರ ಬಜೆಟ್’ ರೂಪಿಸಿದ ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಅದಕ್ಕಾಗಿ 100 ಕೋಟಿ ರೂ. ತೆಗೆದಿರಿಸಲಾಗಿದೆ ಎಂದರು. ಮಣ್ಣಿನಲ್ಲಿ ಜೈವಿಕ ಅಂಶ ಹೆಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ಅದಕ್ಕಾಗಿ ಯಾವುದೇ ಕ್ರಿಯಾಯೋಜನೆಗಳ ಮತ್ತು ಅನುಷ್ಠಾನದ ಅಗತ್ಯವಿದ್ದರೂ ತಕ್ಷಣ ಪ್ರಾರಂಭಿಸುತ್ತೇವೆ ಎಂದು ಪುನರುಚ್ಚರಿಸಿದರು.
ಆರೋಗ್ಯ ಸಚಿವ ಕೆ. ಸುಧಾಕರ್ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದ ಸದ್ಗುರುಗಳ ಬದ್ಧತೆಯನ್ನು ಶ್ಲಾಘಿಸಿದರು ಮತ್ತು ಅವರ ಈ ಪ್ರಯತ್ನವು, ನಮ್ಮ ಹಿಂದಿನ ತಲೆಮಾರಿನವರು ನಮಗೆ ನೀಡಿದ ಶುದ್ಧ ನೀರು ಮತ್ತು ಜೀವಂತ ಮಣ್ಣನ್ನು ಅದೇ ಶುದ್ಧತೆಯಲ್ಲಿ ನಾವು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ತೋರಿಸುತ್ತಿದೆ ಎಂದರು. ಭಾರತದ ಒಬ್ಬರು ಗುರುಗಳು ಮಣ್ಣು ಉಳಿಸಿ ಅಭಿಯಾನದೊಂದಿಗೆ ಇಡೀ ಪ್ರಪಂಚವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ ಅವರು ಈ ಅಭಿಯಾನವನ್ನು ಸೇರಲು ಜನತೆಗೆ ಕರೆ ನೀಡಿದರು.