ರಾಮಚಂದ್ರಾಪುರ ಮಠದಲ್ಲಿ ಗೋದೀಪ ಕಾರ್ಯಕ್ರಮ; ವಿವಿಧ ಗಣ್ಯರಿಂದ ಗೋಪೂಜೆ

gopuje
Published on

ಬೆಂಗಳೂರು: ಹಳ್ಳಿಗಳನ್ನು ಬಿಟ್ಟು ಜನ ಬೆಂಗಳೂರು ಸೇರಿದ ನಂತರ ತಮ್ಮ ಸಂಸ್ಕೃತಿಯನ್ನೂ ಮರೆಯುತ್ತಿರುವುದು ದುರಂತ. ಈ ನಡುವೆ ಹಳ್ಳಿಗಳಲ್ಲಿ ಕೂಡಾ ನಗರ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಗಿರಿನಗದಲ್ಲಿರುವ ಶಾಖಾ ಮಠದಲ್ಲಿ ಆಯೋಜಿಸಿದ್ದ ‘ಗೋದೀಪ - ದೀಪಾವಳಿ ಗೋಪೂಜೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗೋವು ಜನಜೀವನದ ಆಧಾರವಾದ್ದರಿಂದ ಗೋವಿಗೆ ಪೂಜೆ ಸಲ್ಲಬೇಕು ಎಂದು ಭಾಗವತದಲ್ಲಿ ಕೃಷ್ಣ ಹೇಳಿದ್ದಾನೆ. ಗೋವನ್ನು ನಮ್ಮ ಜೀವನದಲ್ಲಿ ಜೋಡಿಸಿಕೊಳ್ಳಬೇಕು. ಪೇಟೆಯಲ್ಲಿ ಗೋಪೂಜೆ ಮಾಡಲು ಗೋವು ಇಲ್ಲ, ಪೂಜೆ ಮಾಡುವ ಮನಸ್ಸು ಇಲ್ಲಾ ಎಂಬಂತಾಗಿದೆ. ಈ ಕುರಿತಾಗಿ ಜಾಗೃತಿ ಮೂಡಿಸಲು ಇಂದು ಮಠದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಂದ ಪೂಜೆ ನಡೆಸಲಾಗಿದೆ. ಈ ಸಂಸ್ಕೃತಿ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ದಂಪತಿ, ವಿಶ್ರಾಂತ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ದಂಪತಿಗಳು, ಶಾಸಕ ರವಿಸುಬ್ರಹ್ಮಣ್ಯ ದಂಪತಿಗಳು, ಹಿರಿಯ ನ್ಯಾಯವಾದಿ

ಡಾ. ಅರುಣ್ ಶ್ಯಾಮ್ ದಂಪತಿಗಳು, ಖ್ಯಾತ ಲೇಖಕ ಡಾ. ನಾ. ಸೋಮೇಶ್ವರ ದಂಪತಿಗಳು, ಪತ್ರಕರ್ತೆ ಶೋಭಾ ಮಳವಳ್ಳಿ ದಂಪತಿ ಸೇರಿದಂತೆ ಮತ್ತಿತರ ಗಣ್ಯರು ಗೋಪೂಜೆ ಸಲ್ಲಿಸಿದರು. ಗೋಸೂಕ್ತ ಪಾರಾಯಣ, ಗೋಸೂಕ್ತ ಹವನ ಹಾಗೂ ಶಿವಶ್ರೀ ಸ್ಕಂದಪ್ರಸಾದ ಮತ್ತು ತಂಡದವರಿಂದ ‘ಗೋ ಗಾನಾಮೃತ’ ಸಂಗೀತ ಕಾರ್ಯಕ್ರಮ ನಡೆಯಿತು.

ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನ ತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

"ಮದುವೆಯಾದ ನಂತರ ಮೊದಲ ದೀಪಾವಳಿಯನ್ನು ರಾಮಚಂದ್ರಾಪುರ ಮಠದಲ್ಲಿ ಗೋಪೂಜೆಯೊಂದಿಗೆ ಆಚರಿಸುತ್ತಿರುವುದು ನಮ್ಮ ಭಾಗ್ಯ. ಗೋಸಂರಕ್ಷಣೆಗೆ ಶ್ರೀಗಳ ಕೊಡುಗೆ ಅಪಾರ. ಬೆಂಗಳೂರು ನಗರದಲ್ಲಿ ದೇಶಿ ಗೋವಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು" - ತೇಜಸ್ವಿ ಸೂರ್ಯ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net