ಹುಡುಗಿಯ ಹುಡುಗಾಟಕ್ಕೆ ಕೆರಳಿದ ಆಡು; ಹಿಂದಿನಿಂದ ಬಿತ್ತೊಂದು ಡಿಚ್ಚಿ!

G F
Published on

ನವದೆಹಲಿ: ಸಾಮಾನ್ಯವಾಗಿ ಕೈಯಲ್ಲೊಂದು ಮೊಬೈಲ್​ಫೋನ್​ ಇದ್ದುಬಿಟ್ಟರೆ ಸಾಕು, ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೇನೂ ಕಡಿಮೆ ಇಲ್ಲ. ಅಂಥವರು ಈ ವಿಡಿಯೋ ನೋಡಲೇಬೇಕು. ಏಕೆಂದರೆ ಸೆಲ್ಫಿ ತೆಗೆದುಕೊಳ್ಳುವ ಮೊದಲು ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಆಪತ್ತು ಖಚಿತ.

ಸೆಲ್ಫಿ ಕ್ರೇಜ್​ಗೆ ಪ್ರಪಾತಕ್ಕೆ ಬಿದ್ದ, ನೀರಲ್ಲಿ ಕೊಚ್ಚಿಹೋದ, ಅಪಘಾತಕ್ಕೆ ಒಳಗಾದ ಹಲವು ಪ್ರಕರಣಗಳಿವೆ. ಆದರೆ ಈ ಪ್ರಕರಣ ಅವೆಲ್ಲವುಗಳಿಂತ ಭಿನ್ನ. ಆಡಿನ ಮುಂದೆ ಹುಡುಗಾಟ ಮಾಡಲು ಹೋದ ಹುಡುಗಿಯೊಬ್ಬಳು ಸರಿಯಾದ ಏಟನ್ನು ತಿಂದುಬಿಟ್ಟಿದ್ದಾಳೆ. ಅಂಥದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವತಿಯೊಬ್ಬಳು ಹಳ್ಳಿಗಾಡಿನ ರಸ್ತೆಯಂತಿರುವ ಪ್ರದೇಶವೊಂದರಲ್ಲಿ ಕಟ್ಟಿಹಾಕಿದ್ದ ಆಡನ್ನು ಕಂಡು ಅದು ಕಾಣಿಸುವಂತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾಳೆ. ಮೂತಿ ಮುಂದಕ್ಕೆ ಚಾಚಿ ಮುತ್ತಿಕ್ಕುವ ರೀತಿ ಪೋಸ್ ಕೊಡುತ್ತ ಆಡು ಕಾಣಿಸುವಂತೆ ಸೆಲ್ಫಿ ವಿಡಿಯೋ ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಹಗ್ಗದ ಸಹಿತ ಅವಳ ಹತ್ತಿರದವರೆಗೆ ಬಂದ ಆಡು ಹಿಂದಿನಿಂದ ಅವಳ ತಲೆಗೆ ಡಿಚ್ಚಿ ಹೊಡೆಯುತ್ತದೆ. ಆಡಿನ ಹೊಡೆತಕ್ಕೆ ಯುವತಿ ಬೀಳುತ್ತಿದ್ದಂತೆ ವಿಡಿಯೋ ಮೊಟಕುಗೊಳ್ಳುತ್ತದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗುತ್ತಿದ್ದು, ತಮಾಷೆಯೂ ಸೇರಿ ತರಹೇವಾರಿ ಕಮೆಂಟ್​ಗಳು ಕೂಡ ಬರುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net