

ಗೋವಾ: ಅನೇಕ ವರ್ಷಗಳಿಂದ ಕಳಸಾ ಬಂಡೂರಿ ಯೋಜನೆಗಾಗಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿತ್ತು. ಇತ್ತೀಚೆಗೆ ಹೋರಾಟದ ಫಲವಾಗಿ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ಸ್ವೀಕಾರ ಮಾಡಿತ್ತು.
ಈ ಬಗ್ಗೆ ಹೇಳಿಕೆ ನೀಡಿದ್ದ ಸಂಸದೀಯ ವ್ಯವಹಾರಗಳ ಸಚಿವ, ಪ್ರಹ್ಲಾದ್ ಜೋಶಿ 'ಇನ್ನು ಸುಲಭವಾಗಿ ಯೋಜನೆಗೆ ಚಾಲನೆ ಸಿಗಲಿದೆ' ಎಂದಿದ್ದರು. ಆದರೆ ಈಗ ಗೋವಾ ಸರ್ಕಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಗೆ ನೀರು ಎರಚಿದೆ.
ಇದೀಗ ಕರ್ನಾಟಕಕ್ಕೆ ಸೆಡ್ಡು ಹೊಡೆದಿರುವ ಗೋವಾ, ಮಹದಾಯಿ ವಿಚಾರವನ್ನು ಕೇಂದ್ರಕ್ಕೆ ಸರ್ವ ಪಕ್ಷಗಳ ಶಾಸಕಾಂಗ ಪಕ್ಷದ ನಿಯೋಗ ಒಯ್ಯಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದೆ.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಜಲಶಕ್ತಿ ಸಚಿವ ಶೇಖಾವತ್ ಭೇಟಿಗೆ ಗೋವಾ ಮುಖ್ಯಮಂತ್ರಿ ಸಾವಂತ ನಿರ್ಧಾರ ಮಾಡಿದ್ದಾರೆ. ಇಂದು ಸಂಜೆಯೇ ಪಣಜಿಯಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದೆ. ಮಹಾರಾಷ್ಟ್ರದ ಗಡಿ ಸವಾಲಿನ ನಂತರ, ನೀರಿಗಾಗಿ ಗೋವಾ ಕರ್ನಾಟಕಕ್ಕೆ ಅಡ್ಡಗಾಲು ಹಾಕಿದೆ.