

ಬೆಂಗಳೂರು: ದೊಡ್ಡನಾಗಮಂಗಲದಲ್ಲಿ ಹೊಸ ವರ್ಷದಂದು ಸಣ್ಣ ಇಯರ್ಪೋನ್ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ 27 ವರ್ಷದ ಕಾರ್ತಿಕ್ ಎನ್ನುವ ಯುವಕ ಸಾವಿಗೀಡಾಗಿದ್ದಾನೆ.
ಕಳೆದ ರಾತ್ರಿ ಹೊಸ ವರ್ಷದಂದೇ ಉತ್ತರಪ್ರದೇಶ ಮೂಲದ ರಜನೀಶ್ ಎಂಬಾತನ ಬರ್ತಡೇ ಇತ್ತು. ಹೀಗಾಗಿ ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಪಾರ್ಟಿ ಮಾಡಲು ಸ್ನೇಹಿತರನ್ನು ಕರೆಸಿಕೊಂಡಿದ್ದ. ದೊಡ್ಡನಾಗಮಂಗಲದ ನಿರ್ಮಾಣ ಹಂತದ ಬಿಲ್ಡಿಂಗ್ ಒಂದರಲ್ಲಿ ಪಾರ್ಟಿ ನಡೆದಿದೆ.
ಬರ್ತಡೇ ಬಾಯ್ ರಜನೀಶ್ಗೆ ಮಲಗುವ ವೇಳೆ ಇಯರ್ಪೋನ್ ಕಿವಿಗೆ ಹಾಕಿಕೊಂಡು ಮ್ಯೂಸಿಕ್ ಕೇಳುವ ಅಭ್ಯಾಸ ಇತ್ತು. 1ನೇ ತಾರೀಕು ರಾತ್ರಿ ಪಾರ್ಟಿ ಮುಗಿದ ನಂತರ ರಜನೀಶ್ ಇಯರ್ ಪೋನ್ ಮಿಸ್ ಆಗಿದೆ. ಈ ವೇಳೆ ಕುಡಿದ ಮತ್ತಲ್ಲಿ ಸ್ನೇಹಿತ ಕಾರ್ತಿಕ್ ಜೊತೆ ಈತ ಕಿರಿಕ್ ಮಾಡಿಕೊಂಡಿದ್ದಾನೆ.
ಕಾರ್ತಿಕ್ ಇಯರ್ ಪೋನ್ ತೆಗೆದುಕೊಂಡಿದ್ದಾನೆ ಎಂದು ಕುಡಿದ ಮತ್ತಿನಲ್ಲಿದ್ದ ರಜನೀಶ್, ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಸಂದರ್ಭ ರಜನೀಶ್ ಪರ ವಹಿಸಿದ್ದ ಸ್ನೇಹೊತರು ಕೂಡ ಸೇರಿಕೊಂಡು ಕಾರ್ತಿಕ್ ಗೆ ಥಳಿಸಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಕಾರ್ತಿಕ್, ಸಾವಿಗೀಡಾಗಿದ್ದಾನೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದ ಬಳಿ ಘಟನೆ ನಡೆದಿದೆ. ಬಾಲಾಜಿ ಕನ್ಸ್ಟ್ರಕ್ಷನ್ ಸೇರಿದ್ದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಈ ಭೂಪರು ಪಾರ್ಟಿ ಮಾಡಿದ್ದರು. ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳಾದ ರಜನೀಶ್ ಹಾಗೂ ರವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು. ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.