ಗೋ ಹಂತಕರನ್ನು ಜೈಲಿಗಟ್ಟಿ : ವಿಹಿಂಪ ಆಗ್ರಹ : ಬೃಹತ್ ಮಾಫಿಯಾ ಕೈವಾಡ ಆರೋಪ

Published on

ಬೆಳ್ತಂಗಡಿ: ಗೋ ವಧೆ ಮಾಫಿಯಾ ನಡೆಸುತ್ತಿರುವವರನ್ನು ಮಟ್ಟಹಾಕಿ ಜೈಲಿಗೆ ಅಟ್ಟಬೇಕು ಎಂದು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಹೇಳಿದರು.

ಬುಧವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಾರ್ಮಾಡಿಯ ಮೃತ್ಯುಂಜಯ ಹೊಳೆಯ ಅನ್ನಾರು ಎಂಬಲ್ಲಿ ದನದ ತಲೆ, ಚರ್ಮ ಇತ್ಯಾದಿ ತ್ಯಾಜ್ಯಗಳನ್ನು ತುಂಬಿಸಿದ ಹಲವು ಗೋಣಿಚೀಲಗಳನ್ನು ಎಸೆದಿದ್ದು ಕಂಡುಬಂದಿದೆ. ಇದೇ ರೀತಿ ಹಲವು ಸಮಯದಿಂದ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಜಾರಿಯಲ್ಲಿದ್ದು ಗೋ ಹತ್ಯೆಗೆ ಏಳು ವಷರ್ ಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ಇದೆ. ನಮಗೆ ಸಿಕ್ಕಿದ ಮಾಹಿತಿಯಂತೆ ಚಾರ್ಮಾಡಿಯ ಆಸುಪಾಸಿನಲ್ಲಿ ಈ ಕಾಯ್ದೆ ಉಲ್ಲಂಘಿಸಿ ಗೋಮಾಂಸ ಮಾಡುವ ಬೃಹತ್ ಮಾಫಿಯಾ ಕಾರ್ಯವೆಸಗುತ್ತಿದ್ದು ಆಸುಪಾಸಿನಲ್ಲಿ ಅಕ್ರಮ ಕಸಾಯಿಖಾನೆಗಳಲ್ಲಿ ಗೋವಧೆ ಮಾಡಿ ಗೋಮಾಂಸವನ್ನು ಬೆಳ್ತಂಗಡಿ, ಪುತ್ತೂರು, ಮಂಗಳೂರು ಕಡೆ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಸಾಗಾಟ, ವಧಾ ಸ್ಥಳ, ಗೋಮಾಂಸ ಸಾಗಾಟ ಮಾರಾಟಗಳನ್ನು ನಿಲ್ಲಿಸಲು ವಿಶೇಷ ಪೊಲೀಸ್ ಪಡೆ ರಚಿಸಬೇಕು. ಇದರ ಹಿಂದೆ ದೊಡ್ಡ ಮಾಫಿಯಾ ಇದ್ದು ಮಾಫಿಯಾದ ಜನರನ್ನು ಹಿಡಿದು ಜೈಲಿಗಟ್ಟಬೇಕು. ಆರೋಪಿಗಳನ್ನು ಸ್ಟೇಷನ್ ಜಾಮೀನಿನಲ್ಲಿ ಬಿಡದೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಮಾಂಸ ಎಲ್ಲೆಲ್ಲಿ ಮಾರಾಟವಾಗುತ್ತಿದೆ, ಗೋವುಗಳನ್ನು ಎಲ್ಲಿಂದ ತರಲಾಗಿದೆ ಎಂಬಿತ್ಯಾದಿ ಬಗ್ಗೆ ಸರಿಯಾಗಿ ವಿಚಾರಣೆ ನಡೆಸಿ ಗೋ ವಧೆ ಪೂರ್ತಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರ: ಹೊಳೆಗೆ ಗೋಮಾಂಸ, ತ್ಯಾಜ್ಯಗಳನ್ನು ಹಾಕಿದರೆ ಅದು ಧರ್ಮಸ್ಥಳದ ಸ್ನಾನಘಟ್ಟಕ್ಕೆ ಬರುವುದರಿಂದ ಅಲ್ಲಿ ಸಾವಿರಾರು ಶ್ರದ್ಧಾಳು ಹಿಂದುಗಳು ಪವಿತ್ರ ಸ್ಥಾನ ಮಾಡುವಾಗ ನೀರನ್ನು ಅಪವಿತ್ರಗೊಳಿಸುವ ಹುನ್ನಾರ ಇದು ಎಂದು ಕಾಣುತ್ತಿದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಸ್ನಾನಘಟ್ಟ ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಿದೆ ಎಂದರು.

ವಿಹಿಂಪ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಕುಮಾರ್ ಬೆಳ್ತಂಗಡಿ, ಬಜರಂಗ ದಳ ಸಂಚಾಲಕ ಸಂತೋಷ್ ಅತ್ತಾಜೆ, ಗೋರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net