

ಕುಂದಾಪುರ: ನಮ್ಮ ಭಾರತ ದೇಶ ಇಂದು ಅಭಿವೃದ್ಧಿಯ ಹೊಸ ಶಕೆಯಲ್ಲಿದ್ದು ಜಾಗತಿಕ ಮನ್ನಣೆ ಗಳಿಸುತ್ತಿದೆ. ಅದಕ್ಕೆ ನಮ್ಮ ಕೌಶಲಯುಕ್ತ ಶಿಕ್ಷಣ ವ್ಯವಸ್ಥೆಯೇ ಕಾರಣ. ವಿಕಸಿತ ಭಾರತದಲ್ಲಿ ಇಂದು ನಮ್ಮ ವಿದ್ಯಾರ್ಥಿಗಳು ಗುಣಮಟ್ಟದ ಪಠ್ಯ, ಸಹಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದಿರಬೇಕು ಎಂದು ನೇರಂಬಳ್ಳಿ ಪ್ರಭಾಕರ ಆಚಾರ್ಯ ಮೆಮೊರಿಯಲ್ ಟ್ರಸ್ಟ್‌ನ ಡಾ.ಭಾಸ್ಕರ್ ಆಚಾರ್ಯ ಹೇಳಿದರು. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢ ಶಾಲಾ ವಿಭಾಗದಲ್ಲಿ ಶನಿವಾರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು. ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಾದ ಅಂಕಿತಾ, ಪ್ರಣಮ್ಯ, ಸ್ಫೂರ್ತಿ, ಯತೀಶ್, ಸಂಜನಾ, ತಸ್ವಿ ತಮ್ಮ ಸಾಧನೆಯಲ್ಲಿ ಸಂಸ್ಥೆಯ ಕೊಡುಗೆ ಪ್ರಶಂಸಿಸಿದರು. ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ, ಎಸ್‌ಡಿಎಂಸಿ ಸದಸ್ಯ ಕುಮಾರಸ್ವಾಮಿ ಜೋಗಿ, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಸ್ವಾಗತಿಸಿದರು. ಶಿಕ್ಷಕಿ ಅನುರಾಧ ಬಹುಮಾನ ಪುರಸ್ಕೃತರ ಪಟ್ಟಿ ವಾಚಿಸಿದರು. ಶಿಕ್ಷಕಿ ದಿವ್ಯಪ್ರಭಾ, ದೈಹಿಕ ಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎಂ.ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಸುಧಾಬಾಯಿ ನಾಯಕ್ ವಂದಿಸಿದರು. ಶಿಕ್ಷಕಿ ಸಂಧ್ಯಾ ನಿರೂಪಿಸಿದರು.
ಉದ್ಯಮ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಸಂಸ್ಥೆಯ ಹಳೇ ವಿದ್ಯಾರ್ಥಿ ವಕ್ವಾಡಿ ಪ್ರವೀಣ್ ಶೆಟ್ಟಿ, ವೈದ್ಯಕೀಯ ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿ ಆಯುಷ್ ಶೆಟ್ಟಿ, ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು, ನೇರಂಬಳ್ಳಿ ಪ್ರಭಾಕರ್ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ 85 ಸಾವಿರ ರೂ.ಗಳನ್ನು ಸಾಧಕ ವಿದ್ಯಾರ್ಥಿಗಳಿಗೆ ವಿತರಿಸಿ ಗೌರವಿಸಲಾಯಿತು.