ಭಜನೆಯಿಂದ ದೇವರ ಅನುಗ್ರಹ ಪ್ರಾಪ್ತಿ

gan (16)
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಕಲಿಯುಗದಲ್ಲಿ ಹರಿನಾಮ ಸ್ಮರಣೆ ಮಾಡಿದರೆ ಕುಲಕೋಟಿ ಉದ್ಧಾರವಾಗುತ್ತದೆ. ಭಜನೆ ಶ್ರೇಷ್ಠ ಮತ್ತು ಸುಲಭ. ದೇವರ ಅನುಗ್ರಹ ಪ್ರಾಪ್ತಿಯಾಗಬೇಕಾದರೆ ಸುಲಭ ಮಾರ್ಗ ಭಜನೆ. ಭಜನೆಯಿಂದ ಮನಸ್ಸಿನ ಕಲ್ಮಶ ದೂರವಾಗುತ್ತದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗಂಗೊಳ್ಳಿ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶತಮಾನೋತ್ಸವದ ಸವಿನೆನಪಿಗಾಗಿ, ಶ್ರೀ ಸಂಸ್ಥಾನ ಕಾಶೀ ಮಠದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ಧಿ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಲಾದ ಅಖಂಡ ಭಜನಾ ಸಪ್ತಾಹ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ದೇವಸ್ಥಾನಕ್ಕೆ ಚಿತ್ತೈಸಿದ ಶ್ರೀಗಳನ್ನು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಜಿ.ರಘುವೀರ ಎಸ್.ನಾಯಕ್, ಯು.ಸದಾನಂದ ಪೈ, ದೇವಳದ ತಾಂತ್ರಿಕ ಜಿ.ರಾಘವೇಂದ್ರ ಆಚಾರ್ಯ, ದೇವಳದ ಅರ್ಚಕ ಜಿ.ಮೋಹನದಾಸ ಭಟ್ ಸ್ವಾಗತಿಸಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಭಜನಾ ಸಪ್ತಾಹದಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನು, ಅನೇಕ ವರ್ಷಗಳಿಂದ ದೇವಸ್ಥಾನದ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿರುವ ಎನ್.ಕೃಷ್ಣಾನಂದ ನಾಯಕ್, ಯು.ಪುಂಡಲೀಕ ಶ್ಯಾನುಭಾಗ್ ಅವರಿಗೆ ಶ್ರೀಗಳು ಪ್ರಸಾದ ನೀಡಿ ಗೌರವಿಸಿದರು.

ಕೆ.ದಿನೇಶ ಕಾಮತ್ ಕೋಟೇಶ್ವರ, ಕೆ.ಶ್ರೀಧರ ಕಾಮತ್ ಕೋಟೇಶ್ವರ, ಅರ್ಚಕರು, ಪುರೋಹಿತರು, ಶ್ರೀ ವಿಠಲ ರಕುಮಾಯಿ ಸೇವಾ ಸಮಿತಿ ಸದಸ್ಯರು, ಶ್ರೀ ವೀರ ವಿಠಲ ಭಜನಾ ಮಂಡಳಿ ಸದಸ್ಯರು, ಹತ್ತು ಸಮಸ್ತರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಜಿ.ರಘುವೀರ ಎಸ್.ನಾಯಕ್ ಸ್ವಾಗತಿಸಿದರು. ಎಂ.ಮುಕುಂದ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net