

ನವದೆಹಲಿ: ಜಾಗತಿಕ ಮಟ್ಟದಲ್ಲಿ COVID19 ಕರೊನಾ ಸೋಂಕು ತ್ವರಿತವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ 20,000ದ ಗಡಿ ದಾಟಿದೆ. ಇದೇ ವೇಳೆ, ಈ ಸೋಂಕು ಆರಂಭವಾದ ಚೀನಾವನ್ನೂ ಸ್ಪೇನ್ ದೇಶ ಮರಣ ಪ್ರಮಾಣದಲ್ಲಿ ಹಿಂದಿಕ್ಕಿದೆ. ಭಾರತದಲ್ಲಿ ಸಾವಿನ ಸಂಖ್ಯೆ 10 ತಲುಪಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಸೋಂಕು ಹರಡಿದ ಪ್ರಮಾಣ ಜಗತ್ತನ್ನೇ ತಲ್ಲಣಗೊಳಿಸಿದೆ. ಜಗತ್ತಿನಾದ್ಯಂತ ಈ ಸೋಂಕು ಈಗ 4 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಎಲ್ಲ ರಾಷ್ಟ್ರಗಳೂ ತೆಗೆದುಕೊಳ್ಳುತ್ತಿವೆ. ಚೀನಾದ ವುಹಾನ್ ನಲ್ಲಿ ಆರಂಭವಾದ ಈ ಸೋಂಕು ಈಗ ಜಗತ್ತಿನ ಮೂಲೆ ಮೂಲೆಗೂ ವ್ಯಾಪಿಸಿದೆ. ವೈದ್ಯಕೀಯ ಆಯಾಮಕ್ಕೆ ಹೊರತುಪಡಿಸಿಯೂ ಈ ಸೋಂಕು ಜಗತ್ತಿನ ಅರ್ಥ ವ್ಯವಸ್ಥೆ ಮೇಲೆ ಇದು ಭಾರಿ ನೆಗೆಟಿವ್ ಪರಿಣಾಮ ಬೀರಿದೆ.
ಎಲ್ಲ ರಾಷ್ಟ್ರಗಳಲ್ಲೂ ಆಂತರಿಕವಾಗಿ ಮತ್ತು ಬಾಹ್ಯವಾಗಿ ಪ್ರಯಾಣ ನಿರ್ಬಂಧಗಳನ್ನು ಅನೇಕ ರಾಷ್ಟ್ರಗಳಲ್ಲಿ ಹೇರಲಾಗಿದೆ. ಲಂಡನ್, ಮಿಲಾನ್, ನ್ಯೂಯಾರ್ಕ್, ಮೆಲ್ಬೊರ್ನ್ ಅಷ್ಟೇ ಏಕೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಇತರೆ ನಗರಗಳಲ್ಲೂ ಸ್ಥಳೀಯ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಂಡಿವೆ. ಭಾರತದಲ್ಲಿ ಸದ್ಯ ಸೋಂಕು ಪೀಡಿತರ ಸಂಖ್ಯೆ 600ರ ಆಸುಪಾಸಿನಲ್ಲಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್)
ಗರಿಷ್ಠ ಸಂಖ್ಯೆಯ ಸಾವು-ನೋವು ಯಾವ್ಯಾವ ದೇಶಗಳಲ್ಲಿ
ದೇಶ ಸೋಂಕುಪೀಡಿತರು ಒಟ್ಟುಸಾವು ನಿನ್ನೆಯ ಸಾವಿನ ಸಂಖ್ಯೆ
ಇಟಲಿ 69,176 6,820
ಸ್ಪೇನ್ 47,610 3,434 +443
ಚೀನಾ 81,218 3,281 +4
ಇರಾನ್ 27,017 2,077 +143
ಫ್ರಾನ್ಸ್ 22,304 1,100
ಅಮೆರಿಕ 54,963 784 +4
ಯುಕೆ 8,077 422
ನೆದರ್ಲೆಂಡ್ಸ್ 5,560 276
ಬೆಲ್ಜಿಯಂ 4,937 178 +56
ಜರ್ಮನಿ 34,009 172 +13