ನೀವೊಬ್ಬ ಅಭಿಮಾನಿಯನ್ನು ಕಳ್ಕೊಂಡ್ರಿ! ಅದೊಂದು ಕಾರಣಕ್ಕೆ ಸೆಹ್ವಾಗ್ ಜತೆಗೆ ಮಾತು ಬಿಟ್ಟೆ: ಗ್ಲೆನ್​ 'ಮ್ಯಾಕ್ಸಿ'ಮಮ್​ ಮಾತು | Glenn

ವಿಜಯವಾಣಿ (39)
Published on

Glenn Maxwell: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್, ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಆರ್​ಸಿಬಿ ತಂಡದಿಂದ ಪಂಜಾಬ್ ಕಿಂಗ್ಸ್‌ ಪಡೆಗೆ ಸೇರ್ಪಡೆಯಾಗಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿಯೇ. ಕಳೆದ ನವೆಂಬರ್​ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ತನ್ನನ್ನು ತಂಡದಿಂದ ಕೈಬಿಟ್ಟ ಆರ್​ಸಿಬಿಗೆ ಗುಡ್​ಬೈ ಹೇಳಿದ ಗ್ಲೆನ್​, ನಟಿ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್​ ಜತೆಗಿನ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೇ ಮಾ.22ರಿಂದ ಪ್ರಾರಂಭವಾಗಲಿರುವ ಐಪಿಎಲ್​ ಆವೃತ್ತಿಗೆ ಸಿದ್ಧರಾಗಿರುವ ಮ್ಯಾಕ್ಸಿ, ಮೈದಾನದಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಅಂದು ಪಂಜಾಬ್ ನಾಯಕ

ಮೆಗಾ ಹರಾಜಿನಲ್ಲಿ 4.2 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್​ ಪಾಲಾದ ಮ್ಯಾಕ್ಸ್​ವೆಲ್​, 18ನೇ ಆವೃತ್ತಿಯಲ್ಲಿ ಅಬ್ಬರಿಸಲು ನೆಟ್ಸ್​ನಲ್ಲಿ ಶ್ರಮಿಸುತ್ತಿದ್ದಾರೆ. 2014, 2015 ಮತ್ತು 2016ರ ಸೀಸನ್​ಗಳಲ್ಲಿ ಪಂಜಾಬ್ ಪರ ಆಡಿ, ಅದ್ಭುತ ಪ್ರದರ್ಶನ ನೀಡಿದ್ದ ಮ್ಯಾಕ್ಸ್​ವೆಲ್​, 2017ರಲ್ಲಿ ಪಂಜಾಬ್ ಕಿಂಗ್ಸ್‌ಗೆ ಕ್ಯಾಪ್ಟನ್​ ಆಗಿ ತಂಡವನ್ನು ಮುನ್ನಡೆಸಿದರು. ಈ ಸಮಯದಲ್ಲಿ ಅವರಿಗಾದ ಒಂದು ಮರೆಯಲಾದ ಘಟನೆ ಮತ್ತು ನೋವಿನ ಕುರಿತು ಗ್ಲೆನ್​ ಈಗ ತಮ್ಮ ಪುಸ್ತಕದ ಮುಖೇನ ಬಹಿರಂಗಪಡಿಸಿದ್ದಾರೆ

ಅಂದಿನ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಲು ಸಂಪೂರ್ಣವಾಗಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್​ ತಂಡವು, ಲೀಗ್ ಹಂತದಲ್ಲಿಯೇ ಈ ಸೋಲಿನ ಮೂಲಕ ತವರಿಗೆ ಮರಳಿತು. ಈ ಪಂದ್ಯದಲ್ಲಿ ಪಂಜಾಬ್ ಕೇವಲ 73 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲನ್ನು ಅನುಭವಿಸಿತು. ಆಗ ತಂಡದ ಕ್ಯಾಪ್ಟನ್ ಆಗಿದ್ದು ಗ್ಲೆನ್ ಮ್ಯಾಕ್ಸ್​ವೆಲ್​. ಪಂದ್ಯ ಸೋತಿದ್ದೇ ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಜತೆಗಿನ ಜಗಳ, ಮನಸ್ತಾಪಕ್ಕೆ ಕಾರಣವಾಯಿತು.

ಪಂಜಾಬ್ ಕಿಂಗ್ಸ್​ ಮೆಂಟರ್

ಇತ್ತೀಚೆಗೆ, ಮ್ಯಾಕ್ಸ್‌ವೆಲ್ ತಮ್ಮ "ಗ್ಲೆನ್ ಮ್ಯಾಕ್ಸ್‌ವೆಲ್: ದಿ ಶೋಮ್ಯಾನ್" ಪುಸ್ತಕದಲ್ಲಿ ಸೆಹ್ವಾಗ್ ಅವರೊಂದಿಗಿನ ಜಗಳದ ಬಗ್ಗೆ ಬರೆದಿದ್ದಾರೆ. ಅಂದು ಪಂಜಾಬ್ ಕಿಂಗ್ಸ್​ ಮೆಂಟರ್​ ಆಗಿದ್ದ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ತೀವ್ರ ವಾಗ್ವಾದ ನಡೆದಿತ್ತು. ಸೆಹ್ವಾಗ್ ಎಲ್ಲರ ಮುಂದೆ ನನ್ನನ್ನು ಅವಮಾನಿಸಿದರು ಎಂದು ಮ್ಯಾಕ್ಸ್‌ವೆಲ್ ಹೇಳಿಕೊಂಡಿದ್ದಾರೆ.

ವಾಟ್ಸಾಪ್ ಗ್ರೂಪ್​ನಿಂದ ಕಿತ್ತುಬಿಸಾಡಿದ್ದರು

"ಆ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕಿತ್ತು. ಆದರೆ, ನಾನು ಸ್ವಯಂಪ್ರೇರಿತರಾಗಿ ಪತ್ರಿಕಾಗೋಷ್ಠಿಗೆ ಹೋಗಿ ಸೋಲಿನ ಹೊಣೆಯನ್ನು ವಹಿಸಿಕೊಂಡೆ. ಅದರ ನಂತರ, ನಾವೆಲ್ಲರೂ ಹೋಟೆಲ್‌ಗೆ ಹೋಗಲು ಬಸ್ ಹತ್ತಿದೆವು. ಆ ಸಮಯದಲ್ಲಿ, ನನ್ನನ್ನು ನಮ್ಮ ತಂಡದ ಮುಖ್ಯ ವಾಟ್ಸಾಪ್ ಗ್ರೂಪ್​ನಿಂದ ತೆಗೆದುಹಾಕಲಾಗಿತ್ತು. ಇದನ್ನು ನಾನು ಗಮನಿಸಿದೆ. ನೀವೊಬ್ಬ ಅಭಿಮಾನಿಯನ್ನು ಕಳೆದುಕೊಂಡಿದ್ದೀರಿ ಎಂದು ನಾನು ತಕ್ಷಣ ಸೆಹ್ವಾಗ್​ಗೆ ಸಂದೇಶ ಕಳುಹಿಸಿದೆ. ಅದಕ್ಕೆ ಅವರು ನಿಮ್ಮಂತಹ ಫ್ಯಾನ್​ ನನಗೆ ಬೇಕಿಲ್ಲ ಎಂದು ಉತ್ತರಿಸಿದರು. ನಾವು ಹೋಟೆಲ್ ತಲುಪುವ ಹೊತ್ತಿಗೆ, ನನ್ನ ಫೋನ್ ಅವರ ಸಂದೇಶಗಳಿಂದಲೇ ತುಂಬಿತ್ತು" ಎಂದು ಮ್ಯಾಕ್ಸಿ ಹೇಳಿದರು.

"ಅವರ ಈ ನಡವಳಿಕೆಯಿಂದ ನನಗೆ ಬಹಳ ಬೇಸರವಾಯಿತು. ಪಂದ್ಯದಲ್ಲಿ ಕ್ಯಾಪ್ಟನ್ ಆಗಿ ನನ್ನ ವೈಫಲ್ಯಕ್ಕೆ ಅವರು ನನ್ನನ್ನು ದೂಷಿಸಿ ಮಾತನಾಡಿದರು. ಅಂದಿನಿಂದ ಒಮ್ಮೆಯೂ ಸಹ ಸೆಹ್ವಾಗ್ ಜತೆ ನಾನು ಮಾತನಾಡಿಲ್ಲ. ಯಾವುದೇ ರೀತಿಯಲ್ಲಿಯೂ ಸಂಭಾಷಣೆ ನಡೆಸಿಲ್ಲ" ಎಂದು ಮ್ಯಾಕ್ಸಿ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net