

ನಾನು 1978ರಲ್ಲಿ ಮೈಸೂರಿನಲ್ಲಿ ಓದುತ್ತಿರುವಾಗ ಒಮ್ಮೆ ಪ್ರಥಮ ಚಿಕಿತ್ಸೆ ಬಗ್ಗೆ ಒಂದು ದಿನದ ಕಾರ್ಯಾಗಾರ ಇತ್ತು. ಅಲ್ಲಿ ಡಾಕ್ಟರ್ ಪ್ರತಿ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕೆಂದು ವಿವರಿಸುತ್ತಿದ್ದರು, ಗಾಯವಾದರೆ, ನೀರಿನಲ್ಲಿ ಮುಳುಗಿದ್ದಾಗ ಏನು ಮಾಡಬೇಕು, ಉಸಿರಾಟದ ತೊಂದರೆ ಇದ್ದರೆ ಮತ್ತು ರೋಗಿಯ ದೇಹದಲ್ಲಿ ಆಮ್ಲಜನಕದ ಕೊರತೆ ಇದ್ದಲ್ಲಿ ನಮ್ಮ ಬಾಯಿಯಿಂದ ರೋಗಿಯ ಬಾಯಿಗೆ ಗಾಳಿಯನ್ನು ಊದಬೇಕು ಎಂದು ಹೇಳುತ್ತಿದ್ದರು. ಆಗ ನನ್ನ ಸ್ನೇಹಿತನೊಬ್ಬ ತಕ್ಷಣ ಡಾಕ್ಟರ್‌ಗೆ ಕೇಳಿದ. ಸಾರ್ ನಾವು ಉಸಿರು ಬಿಡುವಾಗ ಇಂಗಾಲದ ಡೈ ಆಕ್ಸೈಡ್ ಬಿಡುತ್ತೇವೆ. ಆವಾಗ ರೋಗಿಗೆ ಆಮ್ಲಜನಕ ಹೇಗೆ ಸಿಗುತ್ತದೆ? ಎಂದು. ಆಗ ಡಾಕ್ಟರ್ ಒಂದು ನಿಮಿಷ ನಮ್ಮೆಲ್ಲರ ಮುಖ ನೋಡಿ ಕೇಳಿದರು. ನಾವು ಉಸಿರಾಡುವಾಗ ಏನನ್ನ ತೆಗೆದುಕೊಳ್ಳುತ್ತೇವೆ? ಗಾಳಿಯಲ್ಲಿ ಆಮ್ಲಜನಕ ಎಷ್ಟು ಪ್ರಮಾಣದಲ್ಲಿ ಇರುತ್ತದೆ? ಶೇ.21 ಸಾರ್ ಎನ್ನುವುದು ನಮ್ಮ ಉತ್ತರ. ನಾವು ಉಸಿರು ತೆಗೆದುಕೊಳ್ಳುವಾಗ ಗಾಳಿಯಲ್ಲಿರುವ ಸಾರಜನಕ, ಇಂಗಾಲದ ಡೈ ಆಕ್ಸೈಡ್, ಇನ್ನಿತರ ಅನಿಲಗಳು ಏನಾಗುತ್ತವೆೆ ಎಂದು ಕೇಳಿದರು. ತರಗತಿ ನಿಶ್ಯಬ್ದವಾಯಿತು, ಯಾರಿಗೂ ಉತ್ತರ ಗೊತ್ತಿಲ್ಲ.
ಆಗ ಡಾಕ್ಟರೇ ಉತ್ತರ ನೀಡಲಾರಂಭಿಸಿದರು, ನಾವು ಉಸಿರಾಡುವಾಗ ಗಾಳಿಯಲ್ಲಿರುವ ಎಲ್ಲ ಅನಿಲಗಳು ನಮ್ಮ ಶ್ವಾಸಕೋಶವನ್ನು ಸೇರುತ್ತವೆ. ಅಂದರೆ ನಾವು ಉಸಿರಾಡುವುದು ಗಾಳಿಯನ್ನೇ ಹೊರತು ಕೇವಲ ಆಮ್ಲಜನಕವನ್ನಲ್ಲ. ರಕ್ತವು, ಶ್ವಾಸಕೋಶದಲ್ಲಿರುವ ಅಂದಾಜು 30 ಕೋಟಿ ಸಣ್ಣ ಸಣ್ಣ ಅಲ್ವೇಲಿ ಗ್ರಂಥಿಗಳ ಮುಖಾಂತರ ಚಲಿಸುವಾಗ, ನಾವು ತೆಗೆದುಕೊಂಡ ಗಾಳಿಯಲ್ಲಿರುವ 21% ಆಮ್ಲಜನಕದಲ್ಲಿ ಕೇವಲ 5% ಆಮ್ಲಜನಕವನ್ನು ಮಾತ್ರ ತೆಗೆದುಕೊಂಡು ರಕ್ತಕಣಗಳಿಗೆ ಸೇರಿಸಿ ನಂತರ ದೇಹದ ಪ್ರತಿಯೊಂದು ಜೀವಕೋಶಕ್ಕೂ ತಲುಪಿಸುತ್ತದೆ. ಶ್ವಾಸಕೋಶದಲ್ಲಿ ಉಳಿದ ಗಾಳಿಯನ್ನು ನಾವು ಬಿಡುವಾಗ ಆ ಗಾಳಿಯಲ್ಲಿ 78% ಸಾರಜನಕ, 16% ಆಮ್ಲಜನಕ, 5.04% ಇಂಗಾಲದ ಡೈಆಕ್ಸೈಡ್ ಮತ್ತು ಇನ್ನಿತರ ಅನಿಲಗಳು ಹೊರಗೆ ಬರುತ್ತವೆ. ನಮ್ಮ ಬಾಯಿಯಿಂದ ರೋಗಿಯ ಬಾಯಿಗೆ ಗಾಳಿಯನ್ನು ಕೊಟ್ಟಾಗ ರೋಗಿಯ ಶ್ವಾಸಕೋಶದಲ್ಲಿರುವ ಅಲ್ವೇಲಿ ಗ್ರಂಥಿಗಳು, ನಾವು ಬಾಯಿಯಿಂದ ಕೊಟ್ಟ ಗಾಳಿಯಲ್ಲಿರುವ 16% ಆಮ್ಲಜನಕದಲ್ಲಿ ತನಗೆ ಬೇಕಾಗಿರುವ 5% ಆಮ್ಲಜನಕವನ್ನು ತೆಗೆದುಕೊಳ್ಳತ್ತವೆ. ನಂತರ ರೋಗಿಯನ್ನು ಬದುಕಿಸುವ ಸಾಧ್ಯತೆ ಹೆಚ್ಚು. ಮೇಲೆ ಹೇಳಿದ ಅಂಕಿ ಅಂಶಗಳು ಪ್ರತಿಯೊಬ್ಬ ವ್ಯಕ್ತಿಯ ವಯಸ್ಸು, ಗಾತ್ರ, ವ್ಯಕ್ತಿಯ ಅಭ್ಯಾಸಗಳು ಮತ್ತು ಅಂದಿನ ಹವಾಗುಣದ ಮೇಲೆ ಸ್ವಲ್ಪ ವ್ಯತ್ಯಾಸವಾಗುತ್ತವೆ ಎಂದು ತಿಳಿಸಿದರು.