

ಗುಳೇದಗುಡ್ಡ: ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸುಂದರ ಪಟ್ಟಣವನ್ನು ರಾಜ್ಯದಲ್ಲೇ ಮಾದರಿಯಾಗಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತ್ಯಾಜ್ಯ ವಿಲೇವಾರಿಗಾಗಿ ಖರೀದಿಸಿದ ಹೊಸ ವಾಹನಗಳಿಗೆ ಚಾಲನೆ ಹಾಗೂ ಪೌರಕಾರ್ಮಿಕರೊಂದಿಗೆ ಉಪಹಾರ ಸೇವನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ನಾವೆಲ್ಲರೂ ಗೌರವ ನೀಡಬೇಕು ಎಂದರು.
ಇದನ್ನೂ ಓದಿ: ದೇವರನ್ನು ನಿತ್ಯ ಪೂಜಿಸಿ
ಪೌರಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ. ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ನೀಡುತ್ತೇನೆ.
ನನ್ನ ತಂದೆಯವರು ಸಚಿವರಾಗಿದ್ದಾಗ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಅದರಂತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಊರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಪುರಸಭೆ ವತಿಯಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಹೊರಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪುರಸಭೆ ಮಾಜಿ ಅಧ್ಯಕ್ಷೆ ಯಲ್ಲವ್ವ ಗೌಡರ, ಶಿಲ್ಪಾ ಹಳ್ಳಿ, ಸದಸ್ಯರಾದ ಜ್ಯೋತಿ ಆಲೂರ, ವಿನೋದ ಮದ್ದಾನಿ, ಅಮರೇಶ ಕವಡಿಮಟ್ಟಿ, ಸಂತೋಷ ನಾಯನೇಗಲಿ, ಯಲ್ಲಪ್ಪ ಮನ್ನಿಕಟ್ಟಿ, ರಾಜು ಹೆಬ್ಬಳ್ಳಿ, ವೈ.ಆರ್. ಹೆಬ್ಬಳ್ಳಿ, ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ, ವ್ಯವಸ್ಥಾಪಕ ರಮೇಶ ಪದಕಿ, ಶ್ರೀನಿವಾಸ ಇನಾನಿ, ಬಸವರಾಜ ಬಂಡಿವಡ್ಡರ, ರಾಜು ತಾಪಡಿಯಾ, ಜಮೀರ ಮೌಲ್ವಿ, ಲೆಂಕೆಪ್ಪ ಹಿರೇಕುರುಬರ ಇದ್ದರು.