

ಹರಿಪ್ರಸಾದ್ ನಂದಳಿಕೆ ಕಾರ್ಕಳ
ತುಂಬಿ ಹರಿಯುವ ನದಿಗೆ ಅಡ್ಡದಾಗಿ ಹಲವು ವರ್ಷಗಳ ಹಿಂದೆ ಕಟ್ಟಲಾದ ಕಬ್ಬಿಣದ ರಾಡುಗಳ ಕಿರುಸೇತುವೆ ಏಣಿಯನ್ನು ಹತ್ತಿ ಇಳಿದು ಪ್ರತಿ ನಿತ್ಯವೂ ವಿದ್ಯಾರ್ಥಿಗಳು, ಗ್ರಾಮಸ್ಥರು ನದಿ ದಾಟುತ್ತಿರುವುದು ಅಪಾಯಕಾರಿಯಾಗಿದ್ದರೂ ಸೇತುವೆ ನಿರ್ಮಾಣದ ಕನಸು ಮಾತ್ರ ಇನ್ನೂ ಕೈಗೂಡಿಲ್ಲ.
ಕಾರ್ಕಳ ತಾಲೂಕಿನ ಬೋಳ ಗ್ರಾಪಂ ವ್ಯಾಪ್ತಿಯ ಬೋಳ ಕೋಡಿ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇಗುಲ ಮುಂಭಾಗದಲ್ಲಿ ಹಲವು ದಶಕಗಳ ಹಿಂದೆ ಬೋಳ ಮುಗುಳಿ ಹಾಗೂ ಬೋಳ ಕೋಡಿ ಪರಿಸರ ಸಂಪರ್ಕಿಸಲು ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಬ್ಬಿಣದ ರಾಡ್ ಬಳಸಿಕೊಂಡು ತೂಗುಸೇತುವೆ ಮಾದರಿಯಲ್ಲಿ ಕಿರು ಸೇತುವೆ ನಿರ್ಮಿಸಲಾಗಿದ್ದು, ಎರಡೂ ಬದಿಯಲ್ಲಿ ಏಣಿ ಜೋಡಿಸಿದ ಪರಿಣಾಮ ಏಣಿಯ ಮೆಟ್ಟಿಲು ಹತ್ತಿ ಇಳಿದು ಈ ಭಾಗದ ಗ್ರಾಮಸ್ಥರು ಸುಸ್ತಾಗಿದ್ದಾರೆ.
ನದಿಯ ಒಂದು ಭಾಗದಲ್ಲಿ ರುದ್ರ ಸೋಮನಾಥೇಶ್ವರ ಹಾಗೂ ಮಾರುತಿ ದೇವಳ ಇನ್ನೊಂದು ಭಾಗದಲ್ಲಿ ಮಾರಗುತ್ತು ಬೆಟ್ಟದಲ್ಲಿ ಸತ್ಯನಾಪುರದ ಸಿರಿಯ ಆಲಡೆ ಮುಗುಳಿ ಕ್ಷೇತ್ರವಿದೆ. ಇದರ ನಡುವೆ ಶಾಂಭವಿ ನದಿ ಮಳೆಗಾಲದ ಸಂದರ್ಭದಲ್ಲಿ ಉಕ್ಕಿ ಹರಿಯುತ್ತಿದ್ದು, ಇದೇ ನದಿ ದಾಟಿಕೊಂಡು ಈ ಭಾಗದ ಗ್ರಾಮಸ್ಥರು ಪ್ರಾಣಭಯದಲ್ಲೇ ಕಬ್ಬಿಣದ ಸೇತುವೆ ದಾಟಿಕೊಂಡು ಸಾಗುವುದು ಅನಿವಾರ್ಯ. ಅಲ್ಲದೆ ಏಣಿ ಹತ್ತುವ ಸಮೀಪದಲ್ಲಿ ಗದ್ದೆಯಿದ್ದು ಮಳೆಗಾಲದಲ್ಲಿ ಸಂಪೂರ್ಣ ಕೆಸರು ತುಂಬುವ ಪರಿಣಾಮ ಮೈ ಮೇಲೆ ಕೆಸರು ಎರಚಿಕೊಂಡೆ ಸಾಗಬೇಕಾದ ಸಂಕಷ್ಟದ ಸ್ಥಿತಿಯಿದೆ. ಸಣ್ಣಪುಟ್ಟ ಮಕ್ಕಳಂತೂ ಈ ಸೇತುವೆ ದಾಟುವುದೇ ಅಪಾಯಕಾರಿ, ಸ್ವಲ್ಪ ಎಡವಿದರೂ ನೀರಿಗೆ ಬಿದ್ದು ದೊಡ್ಡ ಅನಾಹುತ ಸಂಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿ ಮಳೆಗಾಲದಲ್ಲಿ ನದಿ ತುಂಬಿ ಗದ್ದೆಗಳಲ್ಲಿ ಉಕ್ಕಿ ಹರಿಯುವ ಸಂದರ್ಭದಲ್ಲಿ 5ರಿಂದ 6 ತಿಂಗಳು ಎರಡು ಗ್ರಾಮದ ಜನರು ಒಬ್ಬರಿಗೊಬ್ಬರಿಗೆ ಸಂಪರ್ಕವಿಲ್ಲದೆ ಸಂಕಷ್ಟ ಪಡುವಂತಾಗಿದೆ.
ಹಲವು ದಶಕಗಳಿಂದ ಈ ಭಾಗಕ್ಕೊಂದು ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರ ಬೇಡಿಕೆಗೆ ಅಂದಿನ ಶಾಸಕ ವೀರಪ್ಪ ಮೊಯ್ಲಿಯವರ ಮುಂದಿಟ್ಟಾಗ ಸ್ಪಂದಿಸಿ, ಸೇತುವೆ ಮಂಜೂರು ಮಾಡಿಸಿದರು. ನದಿ ಕೆಳಭಾಗದಲ್ಲಿ ಸೇತುವೆಗೆ ಸ್ಥಳ ಗುರುತಿಸಿ ಶಂಕುಸ್ಥಾಪನೆ ನೇರವೇರಿಸಿದರು. ಇನ್ನೇನೂ ಸೇತುವೆ ನಿರ್ಮಾಣಗೊಳ್ಳುತ್ತದೆ ಎನ್ನುವಷ್ಟರಲ್ಲಿ ಕಾರಣಾಂತರಗಳಿಂದ ಸ್ಥಗಿತವಾಯಿತು. ಆ ಬಳಿಕ ಮತ್ತೆ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್ ಅವರಿಂದ ಅನುದಾನ ಮಂಜುರಾಗುವ ಎಲ್ಲ ಲಕ್ಷಣಗಳು ಇದ್ದರೂ ಇಲ್ಲಿನ ಖಾಸಗಿ ಜಮೀನಿನ ಮಾಲೀಕರ ಜಾಗದ ಸಮಸ್ಯೆಯಿಂದ ಮತ್ತೆ ಸೇತುವೆ ನಿರ್ಮಾಣದ ಕನಸ್ಸು ಕನಸ್ಸಾಗಿಯೇ ಉಳಿದಿದೆ.
ಬಹುತೇಕ ವರ್ಷಗಳ ಕನಸ್ಸಿನ ಸೇತುವೆ ನಿರ್ಮಾಣದ ಬಗ್ಗೆ ಪ್ರತಿ ಚುನಾವಣೆ ಸಂದರ್ಭ ಆಶ್ವಾಸನೆ ಕೇಳಿ ಬರುತ್ತದೆ ಆದರೆ ಇಲ್ಲಿಯವರೆಗೂ ಸೇತುವೆ ನಿರ್ಮಾಣ ಕಾರ್ಯ ಮಾತ್ರ ನಡೆದಿಲ್ಲ. ಈ ಭಾಗದಲ್ಲಿ ಸೇತುವೆ ನಿರ್ಮಾಣಗೊಂಡಲ್ಲಿ ಬೋಳದ ಗುತ್ತು, ಬೋಳ ಮಾರಗುತ್ತು, ಅಂಬರಾಡಿ, ನಡಿಗುತ್ತು ಭಾಗದ ಜನರಿಗೆ ಬೋಳ ದೇಗುಲಕ್ಕೆ ಹತ್ತಿರದ ರಸ್ತೆಯಾಗಲಿದೆ. ಕಬ್ಬಿಣದ ಕಿರು ತೂಗುಸೇತುವೆ ಪಕ್ಕದಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ದೊಡ್ಡ ಸೇತುವೆ ನಿರ್ಮಾಣಗೊಳ್ಳುತ್ತದೆ ಎನ್ನಲಾಗುತ್ತಿದ್ದರೂ ಜಾಗದ ಸಮಸ್ಯೆಯಿಂದ ವಿಳಂಬವಾಗಿದೆ. ಇದೀಗ ಜಾಗದ ತಕರಾರು ಸಮಸ್ಯೆ ಮುಗಿದು ಮತ್ತೆ ಜನಪ್ರತಿನಿಧಿಗಳು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದು ಯಾವಾಗ ಇಲ್ಲಿ ಸೇತುವೆ ನಿರ್ಮಾಣಗೊಳ್ಳುತ್ತೋ.? ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ದೊರೆತ್ತಿಲ್ಲ.
ಈ ಕಬ್ಬಿಣದ ಸೇತುವೆಯೂ ಮಧ್ಯ ಭಾಗದಲ್ಲಿಯೇ ದೊಡ್ಡ ರಂದ್ರವೊಂದು ಬಿದ್ದ ಪರಿಣಾಮ ಹಾಗೂ ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಶಿಥಿಲ ವ್ಯವಸ್ಥೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಗ್ರಾಮಸ್ಥರ ಅನುಕೂಲತೆಗಾಗಿ ತಕ್ಕ ಮಟ್ಟಿಗೆ ದುರಸ್ತಿ ಕಾರ್ಯ ಕೈಗೊಂಡು ನಿರ್ವಹಣೆ ಮಾಡಲಾಗಿತ್ತು. ಹೀಗಾಗಿ ಸೇತುವೆ ಸ್ವಲ್ಪ ಗಟ್ಟಿಯಾದರೂ ಈ ಭಾಗದ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಕಂಡಿಲ್ಲ.
ಈ ಭಾಗದಲ್ಲಿ ಸೇತುವೆ ನಿರ್ಮಾಣದ ಬೇಡಿಕೆ ಹಲವು ವರ್ಷಗಳಿಂದ ಇದೆ. 2 ಬಾರಿ ಅನುದಾನ ಇಟ್ಟರೂ ಜಾಗದ ಸಮಸ್ಯೆಯಿಂದ ಸೇತುವೆ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ. ಇದೀಗ ಜಾಗ ಪಂಚಾಯಿತಿಗೆ ಹಸ್ತಾಂತರವಾಗಿದೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣವಾಗಬಹುದು. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಯುತ್ತಿದೆ.-ಬೋಳ ಸತೀಸ್ ಪೂಜಾರಿ ಬೋಳ ಗ್ರಾಪಂ ಮಾಜಿ ಅಧ್ಯಕ್ಷ