

ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ
ಹೊಸಪೇಟೆ: ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಪಂಚಮಸಾಲಿ ಸಮಾಜವನ್ನು ಹಿಂದುಳಿದ ಪ್ರವರ್ಗ ೨ಎ ಜಾರಿಗೊಳಿಸಬೇಕು. ಇಲ್ಲವೇ ಎಲ್ಲ ಲಿಂಗಾಯತ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ಪ್ರವರ್ಗ ೨ಎ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಕಳೆದ ಮೂರು ದಶಕಗಳಿಂದ ಒತ್ತಾಯಿಸಲಾಗುತ್ತಿದೆ. ಕೆಲ ವರ್ಷಗಳಿಂದ ಈ ಹೋರಾಟ ತೀವ್ರಗೊಳಿಸಲಾಗಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ ನಮಗೆ ೨ಎ ಮೀಸಲಾತಿ ಭರವಸೆ ನೀಡಿತ್ತಾದರೂ, ಕಾನೂನು ತೊಡಕಿನಿಂದಾಗಿ ಹೊಸದಾಗಿ ಹಿಂದುಳಿದ ಪ್ರವರ್ಗ ೨ಡಿ ಸೃಷ್ಟಿಸಿತ್ತು. ಅದನ್ನು ಪಡೆದುಕೊಳ್ಳಬೇಕೋ, ಭೇಡವೋ ಎಂಬುದು ಸಮಾಜದ ಜನರ ಗೊಂದಲಕ್ಕೆ ಕಾರಣವಾಗಿತ್ತು.
ಆದರೆ, ಅದು ದೇಶದ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ಅಲ್ಲದೇ, ನಮ್ಮದು ೨ಎ ಬೇಡಿಕೆಯಾಗಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕಳೆದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿAದ ಅದು ಅಧಿಕಾರಕ್ಕೆ ಬಂದಿದೆ. ಲಿಂಗಾಯತರ ಋಣ ಭಾರವನ್ನು ತೀರಿಸುವುದು ಕಾಂಗ್ರೆಸ್‌ನ ಕರ್ತವ್ಯ ಎಂದರು.
ಈ ಹಿನ್ನೆಲೆಯಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಈ ಕುರಿತು ಸವಿವರವಾಗಿ ತಿಳಿಸಿದ್ದೇವೆ.
ಅದಕ್ಕೆ ಅವರೂ ಸಾಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದಷ್ಟು ಬೇಗ ಕಾನೂನು ತಜ್ಞರ ಸಭೆ ಕರೆಯುವುದಾಗಿ ಭರವಸೆ ನೀಡಿ ತಿಂಗಳಾಗಿದೆ. ಶೀಘ್ರವೇ ಸಭೆ ಕರೆದು, ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಬಾರಿ ಎಲ್ಲೆಡೆ ಮುಂಗಾರು ಕೈಕೊಟ್ಟಿದ್ದರಿಂದ ಬರ ಆವರಿಸಿದೆ. ಸರ್ಕಾರ ಕಾರ್ಯಪ್ರವೃತ್ತರಾಗಿ ಎಲ್ಲೆಡೆ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸಲು ಕ್ರಮ ಕೈಗೊಳ್ಳಬೇಕು. ಅಗ್ಯವಿರುವಲ್ಲಿ ಗೋಶಾಲೆ, ಮೇವು ಬ್ಯಾಂಕ್‌ಗಳನ್ನು ಆರಂಭಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.