ತುಮಕೂರಿನ ಅಪ್ರಾಪ್ತೆ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು: ಪೊಲೀಸ್ ತನಿಖೆಯಲ್ಲಿ ಭೀಕರತೆ ಬಯಲು

TMK Honor Killing
Published on

ತುಮಕೂರು: ಅನ್ಯಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿದ್ದ ಅಪ್ರಾಪ್ತ ಬಾಲಕಿಯ ಸಾವಿನ ಪ್ರಕರಣವೀಗ ಮರ್ಯಾದಾ ಹತ್ಯೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಮಗಳನ್ನೇ ಕೊಂದು ಆತ್ಯಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಕುಟುಂಬಸ್ಥರನ್ನೇ ಬಂಧಿಸಲಾಗಿದೆ.

ಕಾಲೇಜಿನಲ್ಲಿ ಲವ್​

ಈ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕಹೆಡಿಗೆಹಳ್ಳಿಯಲ್ಲಿ ನಡೆದಿದ್ದು, ಪೊಲೀಸ್ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಾಗಿದೆ. ನೇತ್ರಾವತಿ (17) ಕೊಲೆಯಾದ ಅಪ್ರಾಪ್ತ ಬಾಲಕಿ. ಆಕೆಯ ತಂದೆ ಪರಶುರಾಮ, ಸಹೋದರ ಶಿವರಾಜು, ಚಿಕ್ಕಪ್ಪ ತುಕಾರಾಂ ಬಂಧಿತ ಆರೋಪಿಗಳು. ನೇತ್ರಾವತಿ, ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಕುಮಾರ್ (21) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.

ಯುವಕನಿಗೆ ಎಚ್ಚರಿಕೆ

ಇಬ್ಬರದ್ದು ಅನ್ಯಜಾತಿಯಾದ್ದರಿಂದ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಹೀಗಾಗಿ ಕಳೆದ ಜೂ. 7 ರಂದು ಮನೆ ಬಿಟ್ಟು ಓಡಿಹೋಗಿದ್ದರು. ಮಾರನೇ ದಿನ ಇಬ್ಬರನ್ನು ಕರೆಸಿ ಎರಡು ಕುಟುಂಬಗಳ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಬಾಲಕಿಯ ಸಹವಾಸಕ್ಕೆ ಬಾರದಂತೆ ಯುವಕನಿಗೆ ಎಚ್ಚರಿಕೆ ನೀಡಿ, ಹುಡುಗಿನ್ನು ಮನೆಗೆ ಕರೆತರಲಾಗಿತ್ತು. ಆದರೆ, ಅದೇ ದಿನ ರಾತ್ರಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆ, ಸಹೋದರ ಹಾಗೂ ಚಿಕ್ಕಪ್ಪ ಸೇರಿ ನೇಣುಬಿಗಿದು ಕೊಲೆ‌ ಮಾಡಿರುವ ಆರೋಪ ಕೇಳಿಬಂದಿದೆ.

ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

ಕೊಲೆಯನ್ನು ಮುಚ್ಚಿಹಾಕಲು ಬಾಲಕಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಕುಟುಂಬಸ್ಥರು ಯತ್ನಿಸಿದ್ದಾರೆ. ಬಳಿಕ ಕೊಲೆಗೆ ಯಾವುದೇ ಕುರುಹು ಸಿಗದಂತೆ ಮೃತದೇಹವನ್ನು ಕುಟುಂಬಸ್ಥರು ಬೆಂಕಿಯಿಂದ ಸುಟ್ಟುಹಾಕಿದ್ದರು. ಆದರೆ, ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306), ಸಾಕ್ಷೃ ನಾಶ (ಐಪಿಸಿ 201) ಅಡಿ ಪ್ರಕರಣ ದಾಖಲಿಸಿಕೊಂಡು, ಶಿರಾ ಡಿವೈಎಸ್​ಪಿ ನವೀನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಕೊಲೆಗೈದಿದ್ದ ಬಾಲಕಿ ತಂದೆ ಪರಶುರಾಮ, ಸಹೋದರ ಶಿವರಾಜು, ಚಿಕ್ಕಪ್ಪ ತುಕಾರಾಂ ಸೇರಿ ಮೂವರನ್ನು ಬಂಧಿಸಲಾಗಿದೆ. ಚೇಳೂರು ಪೊಲೀಸರಿಂದ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net