

ಮಿಚಿಗನ್: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿಯೊಬ್ಬಳು ಗರ್ಭಿಣಿಯಾಗಿ ಪತ್ತೆಯಾದ ವಿಚಿತ್ರ ಪ್ರಕರಣವೊಂದು ನಡೆದಿದೆ. ಎರಡು ವರ್ಷಗಳ ಬಳಿಕ ಕೊನೆಗೂ ಆಕೆ ತನ್ನ ಕುಟುಂಬವನ್ನು ಸೇರಿಕೊಳ್ಳುವಂತಾಗಿದೆ. ಇಂಥದ್ದೊಂದು ಪ್ರಕರಣ ಅಮೆರಿಕದ ಮಿಚಿಗನ್ನ ಪೋರ್ಟ್ ಹುರಾನ್ ಎಂಬಲ್ಲಿ ನಡೆದಿದೆ. ಕಾಣೆಯಾಗಿದ್ದ ಈಕೆಯನ್ನು ಪೊಲೀಸರು ಪತ್ತೆ ಹಚ್ಚಿ ಈಕೆಯ ತಂದೆಗೆ ಒಪ್ಪಿಸಿದ್ದಾರೆ.
ನಾಪತ್ತೆಯಾಗಿದ್ದ ಹುಡುಗಿ ಪೋರ್ಟ್ ಹುರಾನ್ನ ಮನೆಯೊಂದರಲ್ಲಿ ಇರುವ ಕುರಿತು ಸಾರ್ವಜನಿಕರಲ್ಲೊಬ್ಬರು ಪೊಲೀಸರಿಗೆ ಸುಳಿವು ನೀಡಿದ್ದರು. ಆ ಮೇರೆಗೆ ಮಂಗಳವಾರ ಅಲ್ಲಿಗೆ ತೆರಳಿದ್ದ ಪೊಲೀಸರಿಗೆ ಸಹಕರಿಸದೆ ದಾರಿ ತಪ್ಪಿಸುವ ಪ್ರಯತ್ನವೂ ನಡೆದಿತ್ತು.
ಅದಾಗ್ಯೂ ಜಗ್ಗದ ಪೊಲೀಸರು ಮನೆಯೊಳಗೆ ಪರಿಶೀಲನೆಗೆ ಮುಂದಾದರು. ಈ ಸಂದರ್ಭದಲ್ಲಿ ವಾರ್ಡ್ರೋಬ್ನಲ್ಲಿ ಕೂಡಿಡಲಾಗಿದ್ದ ಹುಡುಗಿಯನ್ನು ಪತ್ತೆ ಮಾಡಿದ್ದು, ವಶಕ್ಕೆ ಪಡೆದರು. ಆದರೆ ನಾಪತ್ತೆ ಹಾಗೂ ಗರ್ಭವತಿಯಾದ ಕುರಿತ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಂಡಿದಲ್ಲ. -ಏಜೆನ್ಸೀಸ್