ಪೊಲೀಸರಿಗೆ ತಲೆನೋವಾದ 15 ವರ್ಷದ ಹುಡುಗಿ! 3ನೇ ಬಾರಿ 12 ವರ್ಷದ ಬಾಲಕನ ಜತೆ ಎಸ್ಕೇಪ್​ | Girl Escape

Girl Escape
Published on

ಲಖನೌ: ಹದಿನೈದು ವರ್ಷದ ಬಾಲಕಿಯೊಬ್ಬಳು ಉತ್ತರ ಪ್ರದೇಶ ( Uttar Pradesh ) ದ ನೋಯ್ಡಾ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾಳೆ. ಒಂದಲ್ಲ, ಎರಡಲ್ಲ, ಮೂರನೇ ಬಾರಿ 12 ವರ್ಷದ ಬಾಲಕನ ಜೊತೆ ಹುಡುಗಿ ( Girl Escape ) ಓಡಿ ಹೋಗಿದ್ದಾಳೆ. ಈ ಹಿಂದೆಯೂ ಎರಡು ಬಾರಿ ಪೊಲೀಸರು, ಬಾಲಕಿಯನ್ನು ಪತ್ತೆಹಚ್ಚಿ ಮನೆಗೆ ಕರೆತಂದಿದ್ದರು.

ಇನ್ನು ಹುಡುಗಿಯ ವರ್ತನೆಯಿಂದ ಬೇಸತ್ತು ಇಡೀ ಕುಟುಂಬವೇ ಹಳ್ಳಿಯನ್ನು ತೊರೆಯಲು ಮುಂದಾಗಿದ್ದರು. ಆದರೆ, ಅದಕ್ಕೂ ಮುನ್ನವೇ ಹುಡುಗಿ ಮತ್ತೊಮ್ಮೆ ಬಾಲಕನೊಂದಿಗೆ ಓಡಿ ಹೋಗಿದ್ದಾಳೆ. ಸದ್ಯ ಅವರಿಬ್ಬರು ಎಲ್ಲಿದ್ದಾರೆ ಎಂಬ ಸುಳಿವು ಇನ್ನೂ ಸಿಕ್ಕಿಲ್ಲ. ಈ ಘಟನೆ ನೋಯ್ಡಾದ ಸೆಕ್ಟರ್-58 ರ ಬಿಶನ್ಪುರ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ (ಅ.08) ಸಂಜೆ ಬಾಲಕಿ ಮನೆಯಿಂದ ಓಡಿ ಹೋಗಿದ್ದಾಳೆ. ತಂದೆ ಆಟೋ ತರಲು ಹೋದ ಬಳಿಕ ಬಾಲಕಿ ತನ್ನ ತಾಯಿ ಮತ್ತು ತಂಗಿಯನ್ನು ಯಾಮಾರಿಸಿ ಬಾಲಕನೊಂದಿಗೆ ಓಡಿ ಹೋಗಿದ್ದಾಳೆ. ಕುಟುಂಬಸ್ಥರು ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ಮಗಳ ಪತ್ತೆಗಾಗಿ ಪೊಲೀಸರ ಸಹಾಯ ಕೋರಿದ್ದಾರೆ.

ಬಾಲಕಿಯ ಕುಟುಂಬ ಮೂಲತಃ ಬಿಹಾರದ ದರ್ಬಂಗಾ ಜಿಲ್ಲೆಯವರು. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಿಗೆ 15 ವರ್ಷ ಹಾಗೂ ಕಿರಿಯ ಮಗಳಿಗೆ 12 ವರ್ಷ. ನಾವು ಬಿಹಾರ ಮೂಲದವರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಸುಮಾರು 4 ವರ್ಷಗಳ ಹಿಂದೆಯೇ ನೋಯ್ಡಾಕ್ಕೆ ಬಂದಿದ್ದೆವು. ಬಿಶನ್‌ಪುರದಲ್ಲಿ ಬಾಡಿಗೆಗೆ ಮನೆ ಪಡೆದು ನೆಲೆಸಿದ್ದೆವು ಎಂದು ಬಾಲಕಿಯ ತಂದೆ ಹೇಳಿಕೆ ನೀಡಿದ್ದಾರೆ. ಪತಿ-ಪತ್ನಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಹಿರಿಯ ಮಗಳು ನೆರೆಹೊರೆಯಲ್ಲಿ ವಾಸಿಸುವ ಇತರ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ತನ್ನೊಂದಿಗೆ ಕರೆದೊಯ್ದಿದ್ದಳು. ಪೊಲೀಸರು ಸುಮಾರು ಒಂದು ವಾರದ ನಂತರ ಬೃದಾವನದಲ್ಲಿ ಆಕೆಯನ್ನು ಪತ್ತೆ ಮಾಡಿದರು. ಮನೆಯಿಂದ 50 ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಳು. ಜೈಪುರದಲ್ಲಿ ತಿರುಗಾಡಿದ ನಂತರ ಅವಳು ಬೃಂದಾವನವನ್ನು ತಲುಪಿದ್ದಳು. ಅಲ್ಲದೆ, ಸುಮಾರು 15 ದಿನಗಳ ಹಿಂದೆಯೂ ಹುಡುಗಿ ನೆರೆಹೊರೆಯಲ್ಲಿ ವಾಸಿಸುತ್ತಿದ್ದ 12 ವರ್ಷದ ಹುಡುಗನೊಂದಿಗೆ ನಾಪತ್ತೆಯಾಗಿದ್ದಳು. ಬಹಳ ಶ್ರಮದ ನಂತರ ಅವಳು ಮತ್ತೆ ಸಿಕ್ಕಿದ್ದಳು. ಈ ವರ್ತನೆಯಿಂದ ನೋಯ್ಡಾ ತೊರೆಯಲು ನಿರ್ಧರಿಸಿದ್ದೆವು. ಅಷ್ಟರಲ್ಲಿ ಮಗಳು ಮತ್ತೆ ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಕುಟುಂಬ ಸಮೇತ ದರ್ಭಾಂಗಕ್ಕೆ ತೆರಳಲು ಮುಂದಾಗಿದ್ದರು. ತಂದೆ ಆಟೋ ತೆಗೆದುಕೊಳ್ಳಲು ಹೊರಟಿದ್ದರು. ಆತನ ಪತ್ನಿ ಹಾಗೂ ಕಿರಿಯ ಮಗಳು ಮನೆಯ ಸಾಮಾನುಗಳನ್ನು ಪ್ಯಾಕ್ ಮಾಡುತ್ತಿದ್ದಾಗ ಹಿರಿಯ ಮಗಳು ಅವರನ್ನು ಯಾಮಾರಿಸಿ ಪರಾರಿಯಾಗಿದ್ದಾಳೆ. ನೆರೆಯಲ್ಲಿ ವಾಸಿಸುತ್ತಿದ್ದ 12 ವರ್ಷದ ಬಾಲಕ ಕೂಡ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಬಾಲಕನನ್ನು ಜೊತೆಗೆ ಕರೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯ ಹುಡುಕಾಟಕ್ಕೆ ತಂಡ ರಚಿಸಲಾಗಿದೆ ಎಂದು ಎಡಿಸಿಪಿ ಮನೀಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಶೀಘ್ರದಲ್ಲೇ ಬಾಲಕಿಯನ್ನು ಪತ್ತೆಹಚ್ಚಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net