

ಮಂಗಳೂರು: ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ದೈವದಂತೆ ವೇಷ ಧರಿಸಿ ರೀಲ್ಸ್ ಮಾಡಿದ್ದ ಯುವತಿಯು ಇದೀಗ ತನ್ನ ಹುಚ್ಚಾಟಕ್ಕೆ ಕ್ಷಮೆ ಕೋರಿ ತಪ್ಪೊಪ್ಪಿಗೆ ಕಾಣಿಕೆ ಸಲ್ಲಿಸಿದ್ದಾಳೆ.
ಬೆಂಗಳೂರು ಮೂಲದ ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿ ಕಾಂತಾರಾ ಸಿನಿಮಾದಲ್ಲಿ ಬರುವ 'ವರಾಹ ರೂಪಂ' ಹಾಡಿಗೆ ಪಂಜುರ್ಲಿ ದೈವದಂತೆ ವೇಷತೊಟ್ಟು ಕೈಯಲ್ಲಿ ಪಂಜು ಹಿಡಿದು ದೈವದಂತೆ ನಟಿಸಿ ರೀಲ್ಸ್ ಮಾಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಳು. ಇದು ಕರಾವಳಿ ಮತ್ತು ಇತರ ಭಾಗಗಳಲ್ಲಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿತ್ತು. ಜತೆಗೆ ದೈವವನ್ನು ಅಣಕಿಸಿದಂತಿತು. ಜನರು ಯುವತಿಯ ವಿಡಿಯೋಗೆ ಕಮೆಂಟ್ಗಳ ಮೂಲಕ ಎಚ್ಚರಿಕೆ ನೀಡಿದ್ದಲ್ಲದೇ, ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ಕಂಡು ಬಂದ ಹಿನ್ನೆಲೆ ಶ್ವೇತಾ ವಿಡಿಯೋವನ್ನು ಡಿಲೀಟ್ ಮಾಡಿದ್ದಳು.
ಇದೀಗ ಶ್ವೇತಾ ರೆಡ್ಡಿಗೆ ತನ್ನ ತಪ್ಪಿನ ಅರಿವಾಗಿದೆ. ದೈವಾರಾಧನೆ ಮತ್ತು ಯಕ್ಷಗಾನ ಒಂದೇ ಎಂದು ತಿಳಿದು ಈ ರೀತಿ ಮಾಡಿದ್ದೆ, ನನ್ನಿಂದ ತಪ್ಪಾಗಿದೆ. ನನಗೆ ದೈವದ ಕೋಲ ನೋಡುವ ಅವಕಾಶ ಸಿಕ್ಕರೆ ಖಂಡಿತಾ ನೋಡುತ್ತೇನೆ ಎಂದಿದ್ದಾಳೆ. ಇದಲ್ಲದೇ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ, ತೀರ್ಥ ಸ್ನಾನ ಮಾಡಿ ಮುಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ತಪ್ಪೊಪ್ಪಿಗೆ ಕಾಣಿಕೆ ಸಲ್ಲಿಸಿದ್ದಾಳೆ.
ಕಾಂತಾರಾ ಸಿನಿಮಾ ರೀಲಿಸ್ ಆದ ನಂತರ ಸಿನಿಮಾ ಕಥೆ ಮತ್ತು ಸಿನಿಮಾದಲ್ಲಿನ ಹಾಡುಗಳ ಕುರಿತು ದೇಶ-ವಿದೇಶಗಳಿಂದ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿರುವುದಲ್ಲದೇ, ಪ್ರಸ್ತುತ ಈ ಸಿನಿಮಾ ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಕರಾವಳಿಯ ದೈವಾರಾಧನೆ, ಭೂತ ಕೋಲದ ಆಚರಣೆ, ಸಂಪ್ರದಾಯ ಮತ್ತು ನಂಬಿಕೆಯ ಕುರಿತು ವಿಶೇಷವಾಗಿ ತೋರಿಸಲಾಗಿದೆ. ಅದರಂತೆ ಪಂಜುರ್ಲಿ ದೈವದ ವೇಷಧಾರಿಯಾಗಿ ರಿಷಬ್ ಶೆಟ್ಟಿಯ ನಟನೆಯಂತೂ ಎಲ್ಲರನ್ನೂ ಬೆರಗು ಮೂಡಿಸುವುದರಲ್ಲಿ ಎರಡು ಮಾತಿಲ್ಲ. ದೈವದ ವೇಷ ಧರಿಸಿ ನಡಿಸಲು ನಟ ರಿಷಬ್ ಸಾಕಷ್ಟು ಕಟ್ಟುನಿಟ್ಟಿನ ಸಂಪ್ರದಾಯ, ಆಚರಣೆಗಳನ್ನು ಪಾಲಿಸುವುದರ ಜತೆಗೆ ಎಷ್ಟೋ ದಿನಗಳ ಕಾಲ ಮಾಂಸಾಹಾರ ಸೇವನೆಯನ್ನು ತ್ಯಜಿಸಿದ್ದರು. ಈ ರೀತಿಯ ಹಲವಾರು ರೀತಿಯ ನಿಯಮಗಳನ್ನು ಪಾಲಿಸಿ ದೈವದ ವೇಷತೊಟ್ಟಿದ್ದರು. ಇದರಲ್ಲಿ ಅವರ ನಂಬಿಕೆ, ಶ್ರದ್ಧೆ, ಭಕ್ತಿ ಎಲ್ಲವೂ ಅಡಗಿತ್ತು. ಆದರೆ ಯುವತಿ ದೈವದ ಕುರಿತು ಯಾವುದೇ ಮಾಹಿತಿಯಿಲ್ಲದೇ ಕೇವಲ ಲೈಕ್ಸ್ಗಾಗಿ ಈ ರೀತಿ ರೀಲ್ಸ್ ವಿಡಿಯೋ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಳು.