VIDEO: ಯುವಕನ ಜತೆ ಓಡಿಹೋದ ಬಾಲಕಿ: ತಂದೆಯೆದುರೇ ಗ್ರಾಮಸ್ಥರಿಂದ ಅಮಾನುಷ ಹಲ್ಲೆ

balaki-hodetaweb
Published on

ಛೋಟಾ ಉದೇಪುರ (ಗುಜರಾತ್​): ಛೋಟಾ ಉದೇಪುರ ಜಿಲ್ಲೆಯ ಬಿಲ್ವಂತ್​ ಗ್ರಾಮದ 16 ವರ್ಷದ ಬಾಲಕಿಯೊಬ್ಬಳು ಯುವಕನ ಜತೆ ಓಡಿ ಹೋದ ಕಾರಣಕ್ಕೆ ಆಕೆಯ ತಂದೆಯ ಎದುರೇ ಬಾಲಕಿಯನ್ನು ಹೀನಾಯವಾಗಿ ಥಳಿಸಿ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಓಡಿಹೋಗಿರುವುದಕ್ಕೆ ಇದು ಶಿಕ್ಷೆ ಎಂದು ಹೇಳಿರುವ ಮೂವರು ಪುರುಷರು ಅತ್ಯಂತ ಕ್ರೂರವಾಗಿ ಬಾಲಕಿಯನ್ನು ಥಳಿಸಿದ್ದಾರೆ. ಕೂದಲನ್ನು ಅಮಾನುಷವಾಗಿ ಎಳೆದು ಹಲ್ಲೆ ಮಾಡುವ ಸಂದರ್ಭದಲ್ಲಿ ಬಾಲಕಿಯ ಆಕ್ರಂದನ ಮುಗಿಲು ಮುಟ್ಟಿದ್ದರೂ ಆಕೆಯ ತಂದೆ ಸೇರಿದಂತೆ ಗ್ರಾಮಸ್ಥರೆಲ್ಲಾ ದೃಶ್ಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು!

ಹೀಗೆ ಓಡಿ ಹೋಗುವ ಮೂಲಕ ತಮ್ಮ ಗ್ರಾಮಕ್ಕೆ, ತಮ್ಮ ಸಮುಯದಾಯಕ್ಕೆ ಅಗೌರವ ತಂದಿದ್ದಾಳೆ ಬಾಲಕಿ. ಅದಕ್ಕಾಗಿ ಈ ಶಿಕ್ಷೆ. ಈ ರೀತಿ ಮುಂದೆ ಯಾರೂ ಮಾಡುವ ಸಾಹಸ ಮಾಡಬಾರದು. ಎಲ್ಲರಿಗೂ ಇದು ಪಾಠವಾಗಬೇಕು ಎಂದು ಆಕೆಯನ್ನು ಥಳಿಸುವಾಗ ಗ್ರಾಮಸ್ಥರು ಹೇಳಿದ್ದಾರೆ.

ಒಬ್ಬ ವ್ಯಕ್ತಿ ಬಾಲಕಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಇನ್ನೊಬ್ಬ ಆಕೆಯು ತಪ್ಪಿಸಿಕೊಳ್ಳದಂತೆ ಕುತ್ತಿಗೆಯನ್ನು ಬಲವಾಗಿ ಹಿಡಿದಿದ್ದಾನೆ. ಮತ್ತೋರ್ವ ಆಕೆಯನ್ನು ಕೋಲಿನಿಂದ ಥಳಿಸುತ್ತಿರುವ ಭೀಕರ ದೃಶ್ಯ ಇದಾಗಿದೆ. ಇದನ್ನು ಗ್ರಾಮಸ್ಥರು ಮೊಬೈಲ್​ ಫೋನ್​ನಲ್ಲಿ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ಮುಟ್ಟಿದೆ. ಬಾಲಕಿಯ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ವಿವಿಧ ಕಲಮುಗಳ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net