43 ವರ್ಷದ ವ್ಯಕ್ತಿಯಿಂದ 11ನೇ ವಯಸ್ಸಿಗೆ ತಾಯಿ: ಸಾವಿಗೂ ಮುನ್ನ ಬಾಲಕಿ ಬಿಚ್ಚಿಟ್ಟಳು ದುರಂತ ಕತೆ!

Minor Girl
Published on

ಬ್ರಾಸಿಲಿಯಾ: ನಿರಂತರ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಬಾಲಕಿಯೊಬ್ಬಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ.

ಫ್ರಾನ್ಸಿನಿಲ್ಡೋ ಮೊರೇಸ್ (11) ಮೃತ ಬಾಲಕಿ. ಅಕಾಲಿಕವಾಗಿ ಮಗುವಿಗೆ ಜನ್ಮ ನೀಡಿದ್ದರಿಂದ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ಮೊರೇಸ್​, 43 ವರ್ಷದ ಲೂನಾ ಕೋಸ್ಟಾ ಎಂಬಾತನಿಂದ 9ನೇ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು. ಇದರ ಪರಿಣಾಮ ಆಕೆ 11ನೇ ವಯಸ್ಸಿನಲ್ಲಿ ಗರ್ಭಿಣಿಯು ಆಗಿದ್ದಳು.

ಇಬ್ಬರದ್ದು ಸಾಮನ್ಯ ವಯಸ್ಕ ಸಂಬಂಧವೆಂದು ತೋರಿಸಿಕೊಳ್ಳಲು ಆಕೆಯ ಮನವೊಲಿಸಿದ್ದ ಲೂನಾ ಕೋಸ್ಟಾ, ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದ. ಅಲ್ಲದೆ, ಮೊರೇಸ್​ 5ನೇ ತಿಂಗಳ ಗರ್ಭಿಣಿಯಾಗಿದ್ದ ಸಮಯದಲ್ಲೂ ಫೋಟೋ ತೆಗೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್​ 27ರಂದು ಮಗುವಿಗೆ ಜನ್ಮ ನೀಡಿದ ನಾಲ್ಕ ದಿನಗಳ ಬಳಿಕ ಮೊರೇಸ್​ ಮೃತಪಟ್ಟಿದ್ದಾಳೆ. ಈ ಘಟನೆ ಉತ್ತರ ಬ್ರೆಜಿಲ್​ನ ಪರಾ ರಾಜ್ಯದ ಉರೌರಾ ರೂರಲ್​ ಮುನ್ಸಿಪಾಲಿಟಿಯಲ್ಲಿ ನಡೆದಿದೆ.

ಮೊರೇಸ್​ ದೇಹದಲ್ಲಿನ ಬದಲಾವಣೆಯನ್ನು ನೋಡಿದ ಆಕೆಯ ಕುಟುಂಬ ವೈದ್ಯರ ಬಳಿ ಕರೆದೊಯ್ದಾಗ ಆಕೆ ಐದು ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದಿದೆ. ಇದನ್ನು ಕೇಳಿದ ಕುಟುಂಬಕ್ಕೆ ಆಘಾತವೂ ಆಗಿತ್ತು. ಬಳಿಕ ಮೊರೇಸ್,​ ನಡೆದ ಎಲ್ಲ ಘಟನೆಯನ್ನು ವಿವರಿಸಿದ್ದಳು. ಅಲ್ಲದೆ, ಮೂರು ವರ್ಷಗಳ ಕಾಲ ಅನುಭವಿಸಿದ ನೋವನ್ನು ತೋಡಿಕೊಂಡಿದ್ದಳು. ಮೊರೇಸ್​ ಹೇಳಿದ ಬಳಿಕವಷ್ಟೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಚಾರ ಕುಟುಂಬಕ್ಕೆ ತಿಳಿಯಿತು.

ಲೈಂಗಿಕ ಕಿರುಕುಳದ ಬಗ್ಗೆ ಯಾರೊಬ್ಬರಿಗೆ ಹೇಳಬಾರದು ಎಂದು ಲೂನಾ ಕೋಸ್ಟಾ ಬೆದರಿಕೆ ಹಾಕಿದ್ದ. ಮೊರೇಸ್​ ಮೇಲೆ ನಿರಂತರವಾಗಿ ಅನೇಕ ವರ್ಷಗಳವರೆಗೆ ದೌರ್ಜನ್ಯ ನಡೆಸಿದ್ದಾನೆಂದು ಆಕೆಯ ಆಂಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಯಾರಿಗೂ ಅನುಮಾನ ಬರಬಾರದೆಂದು ಬೆದರಿಸಿ ಆಕೆ ಜತೆಯಲ್ಲಿ ಅನೇಕ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್​ ಮಾಡಿದ್ದಾನೆ. ಅಕ್ರಮ ಸಂಬಂಧ ಹೊರತಾಗಿಯೂ ಇಬ್ಬರ ನಡುವೆ ಒಳ್ಳೆಯ ಸಂಬಂಧವಿದೆ ಎಂದು ಬಿಂಬಿಸಲು ಈ ರೀತಿ ಮಾಡಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಇದೀಗ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ಲೂನಾ ಕೋಸ್ಟಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net