

ಇಟಲಿ: ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾದ ಮೋದಿ ಅವರು ಅಧಿಕಾರವಹಿಸಿಕೊಂಡ ಬಳಿಕ ವಿದೇಶ ಪ್ರವಾಸದಲ್ಲಿ ಇಟಲಿಗೆ ತೆರಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ವಿಶ್ವದ ಬಹುತೇಕ ನಾಯಕರು ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಮೆರಿಕ ಅಧ್ಯಕ್ಷ ಜೋ ಬಿಡನ್, ಯುಎಇ ಅಧ್ಯಕ್ಷ ಮೊ.ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಪೋಪ್ ಫ್ರಾನ್ಸಿಸ್ ಅವರು ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡು ಅಭಿನಂದಿಸಿದರು.
ಪ್ರಧಾನಿ ಮೋದಿಯವರೊಂದಿಗೆ ವಿಶೇಷ ಸೆಲ್ಫಿ ತೆಗೆದುಕೊಂಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಕಿರು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಮೆಲೋನಿ ಅವರು ಹಲೋ ಎಂದು ಹೇಳುತ್ತಿದ್ದಾರೆ. ಹಾಗೂ ಇಬ್ಬರು ನಾಯಕರು ನಗುವುದು ಮತ್ತು ತಮಾಷೆ ಮಾಡುವುದು ಕಂಡುಬರುತ್ತದೆ.
ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಇದೇ ಮೊದಲೆನಲ್ಲ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಮತ್ತು ನಂತರ ದುಬೈನಲ್ಲಿ ನಡೆದ ಸಿಒಪಿ-28ನಲ್ಲಿ ಉಭಯ ನಾಯಕರ ಭೇಟಿಯ ಸಮಯದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ಉಭಯ ದೇಶಗಳು ದ್ವಿಪಕ್ಷೀಯ ರಕ್ಷಣೆ ಮತ್ತು ಭದ್ರತಾ ಸಹಕಾರದ ಕುರಿತು ಚರ್ಚಿಸಿದರು. ರಕ್ಷಣಾ ಕೈಗಾರಿಕಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)