ಅಭಿಮಾನಿಗಳಿಗೇ ಗಿಫ್ಟ್!; ಇಂದು ರವಿಚಂದ್ರನ್ ಹುಟ್ಟುಹಬ್ಬ

Ravichandran
Published on

ಬೆಂಗಳೂರು: ಕಳೆದ ವರ್ಷ ರವಿಚಂದ್ರನ್ ಹುಟ್ಟುಹಬ್ಬದಂದು, ಅವರೊಂದಿಗೆ ನಿರ್ದೇಶಕ ‘ಜಟ್ಟ’ ಗಿರಿರಾಜ್ ಒಂದು ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಬಂದಿತ್ತು. ಈ ವರ್ಷ, ಆ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಇಂದು ರವಿಚಂದ್ರನ್ ಅವರ ಜನ್ಮದಿನ. ಇದು ಅವರ 60ನೇ ಹುಟ್ಟುಹಬ್ಬವಾದ್ದರಿಂದ, ಬಹಳ ವಿಶೇಷ ಎಂದರೆ ತಪ್ಪಿಲ್ಲ. ಈ ಹುಟ್ಟುಹಬ್ಬಕ್ಕೆ ‘ಕನ್ನಡಿಗ’ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಈಗಾಗಲೇ ನಿರ್ದೇಶಕ ಗಿರಿರಾಜ್ ಟೀಸರ್ ಕಟ್ ಮಾಡಿದ್ದು, ಆನಂದ್ ಆಡಿಯೋದ ಯುಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ.

ಇನ್ನು, ರವಿಚಂದ್ರನ್ ಅವರು ತಮ್ಮ ಒನ್ ಆಂಡ್ ಓನ್ಲಿ ಯೂಟ್ಯೂಬ್ ಚಾನಲ್​ನಲ್ಲಿ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿರುವುದು ಗೊತ್ತೇ ಇದೆ. ಈ ಬಾರಿ ಅವರು ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೊಂದು ಉಡುಗೊರೆ ಕೊಟ್ಟಿದ್ದಾರೆ. ಶನಿವಾರ ಅವರೊಂದು ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ರವಿಚಂದ್ರನ್ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದು ಕಾಲ್ಪನಿಕ ಕಥೆಯಲ್ಲ, ನನ್ನಲ್ಲಿರುವ ಸತ್ಯ, ಮನುಷ್ಯರು ಬಣ್ಣಗಳಾಗಿ, ಬಣ್ಣಗಳು ಭಾವನೆಗಳಾಗಿ ...’ ಎಂಬ ಸಾಲಿನೊಂದಿಗೆ ಶುರುವಾಗುತ್ತದೆ. ಈ ವಿಡಿಯೋದಲ್ಲಿ ರವಿಚಂದ್ರನ್, ಜೀವನದ ಕುರಿತಾದ ಹಲವು ಸತ್ಯಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಕನಸಿನ ಚಿತ್ರಗಳಾದ ‘ಗಾಡ್ - ದಿ ಸ್ಟೋನ್ ಹಾರ್ಟೆಡ್’, ‘ಸಿಕ್ಸ್​ಟಿ - ಲೀವಿಂಗ್ ಇನ್ ದಿ ಪಾಸ್ಟ್’, ‘ಬ್ಯಾಡ್ ಬಾಯ್ಸ್​- ಥ್ರೀ ಇನ್ ಒನ್’ ಚಿತ್ರಗಳ ಬಗ್ಗೆ ಪ್ರಸ್ತಾಪವಿದೆ. ಅಷ್ಟೇ ಅಲ್ಲ, ‘ರವಿ ಬೋಪಣ್ಣ’ ಇದೇ ವರ್ಷ ಬಿಡುಗಡೆಯಾಗಲಿದೆ ಎಂಬ ಘೋಷಣೆಯೂ ಇದೆ. ಎಂಟು ನಿಮಿಷಗಳ ಈ ವಿಡಿಯೋವನ್ನು ಅವರು ತಮ್ಮ ಹುಟ್ಟುಹಬ್ಬದ ಗಿಫ್ಟ್ ಆಗಿ ಅಭಿಮಾನಿಗಳಿಗೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net