ಲೋಕಸಭೆ ಚುನಾವಣೆ ಕಣದಿಂದ ಹಿಂದೆ ಸರಿದ ಗುಲಾಂ ನಬಿ ಆಜಾದ್! ಕಾರಣ ಹೀಗಿದೆ..?

nabi
Published on

ಶ್ರೀನಗರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ನಾಯಕ ಗುಲಾಂ ನಬಿ ಆಜಾದ್ ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಏಪ್ರಿಲ್ 2 ರಂದು, ಆಜಾದ್ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಡಿಪಿಎಪಿ ಘೋಷಣೆ ಮಾಡಿತ್ತು. ಅನಂತನಾಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೀನ್​ ಭಟ್, ಗುಲಾಂ ನಬಿ ಆಜಾದ್ ಅವರು (ಅನಂತನಾಗ್-ರಾಜೌರಿ ಕ್ಷೇತ್ರದಿಂದ) ಈ ಬಾರಿ ಸ್ಪರ್ಧಿಸುತ್ತಿಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಹಿರಿಯ ನಾಯಕ ಮಿಯಾನ್ ಅಲ್ತಾಫ್ ಈಗ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ಮುಖಾಮುಖಿಯಾಗಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮಾತನಾಡಿ, ಗುಲಾಂ ನಬಿ ಆಜಾದ್​ ಲೋಕಸಭೆ ಚುನಾವಣೆಯಿಂದ ಸ್ಪರ್ಧೆ ಮಾಡದಿರುವುದರ ಬಗ್ಗೆ ಕಿಡಿಕಾರಿದ್ದು, ಇದು ಬಿಜೆಪಿ ಅವರ ಸ್ಕ್ರಿಪ್ಟ್ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಒಂದೇ ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಲಡಾಖ್‌ನಲ್ಲಿ ಮೇ 20 ರಂದು ಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net