ಮಹಾತ್ಮ ಗಾಂಧಿಯವರ ನೆಚ್ಚಿನ ಭಜನೆಯನ್ನು ಹಾಡಿದ ಜರ್ಮನ್ ಗಾಯಕಿ; ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

modi
Published on

ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಇಡೀ ದೇಶವು ಬಾಪುವಿಗೆ ತನ್ನದೇ ಆದ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. ಈ ಸಂದರ್ಭದಲ್ಲಿ, ಜರ್ಮನ್ ಗಾಯಕಿ ಕಸ್ಸಂದ್ರ ಮೇ ಸ್ಪಿಟ್ಮನ್ ಅವರು ಮಹಾತ್ಮ ಗಾಂಧಿಯವರ ಅತ್ಯಂತ ನೆಚ್ಚಿನ ಹಾಡನ್ನು ಹಾಡಿದ್ದಾರೆ ಮತ್ತು ಸೋಶಿಯಲ್​​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ಪಿಎಂ ಮೋದಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಗಾಯಕಿ ಕಸ್ಸಂದ್ರ ಮೇ ಸ್ಪಿಟ್ಮನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಜೊತೆಗೆ "ಗಾಂಧೀಜಿಯವರ ಆಲೋಚನೆಗಳು ಪ್ರಪಂಚದಾದ್ಯಂತದ ಜನರೊಂದಿಗೆ ಸಂಪರ್ಕ ಹೊಂದಿವೆ'' ! ಎಂದು ಬರೆದುಕೊಂಡಿದ್ದಾರೆ.

ಭಾನುವಾರದಂದು ಈ ವಿಡಿಯೋವನ್ನು ಹಂಚಿಕೊಂಡ ಸ್ಪಿಟ್ಮನ್, "ನಾಳೆ ಗಾಂಧಿ ಜಯಂತಿ. ನಾನು ಗಾಂಧೀಜಿಯವರ ನೆಚ್ಚಿನ ಭಜನೆಯನ್ನು ಅಭ್ಯಾಸ ಮಾಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ ಮೋದಿ
ಕಳೆದ ತಿಂಗಳು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಅವರು ಸ್ಪಿಟ್ಮನ್ ಗೆ ಭಾರತೀಯ ಸಂಗೀತ ಮತ್ತು ಸಂಸ್ಕೃತಿಯ ಮೇಲಿರುವ ಉತ್ಸಾಹ ಕಂಡು ಹೊಗಳಿದ್ದರು. ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ "ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಸಂಗೀತವು ಈಗ ಜಾಗತಿಕವಾಗಿದೆ. ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ" ಎಂದು ಹೇಳಿದರು. ಈ ಪ್ರದರ್ಶನದ ಸಮಯದಲ್ಲಿ ಅವರು ಸ್ಪಿಟ್ಮನ್ ಹಾಡಿದ ಭಾರತೀಯ ಹಾಡನ್ನು ಸಹ ಪ್ಲೇ ಮಾಡಿದರು.

ಮನ್ ಕಿ ಬಾತ್ ಶೋನಲ್ಲಿ ಸ್ಪಿಟ್ಮನ್ ಹಾಡನ್ನು ಪ್ಲೇ ಮಾಡಿದಾಗ ಮೋದಿ, "ಈ ಮಧುರ ಧ್ವನಿ ಪ್ರತಿಯೊಂದು ಪದದ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಧ್ವನಿ ಜರ್ಮನಿಯ ಮಗಳದ್ದು ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಹೆಸರು ಕಸ್ಸಂದ್ರ ಮೇ ಸ್ಪಿಟ್ಮನ್. 21 ವರ್ಷದ ಗಾಯಕಿ. ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್​​​​​​ನಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಜರ್ಮನ್ ಪ್ರಜೆಯಾದ ಇವರು ಭಾರತಕ್ಕೆ ಬಂದಿಲ್ಲ, ಆದರೆ ಭಾರತೀಯ ಸಂಗೀತವನ್ನು ತುಂಬಾ ಇಷ್ಟಪಡುತ್ತಾರೆ ಎಂದಿದ್ದರು.

ಕಸ್ಸಂದ್ರ ಮೇ ಸ್ಪಿಟ್ಮನ್ ಹುಟ್ಟಿನಿಂದಲೇ ಕುರುಡರಾಗಿದ್ದರು. ಆದರೆ ಸಾಧನೆಗೆ ಕುರುಡುತನ ಅಡ್ಡಿಯಾಗಿಲ್ಲ. ಸುಮಾರು ಐದಾರು ವರ್ಷಗಳ ಹಿಂದೆ ಕಸ್ಸಂದ್ರ ಮೇ ಸ್ಪಿಟ್ಮನ್ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಭಾರತೀಯ ಸಂಗೀತವನ್ನು ಹಿಂದೂ ಭಾಷೆಯಲ್ಲಿ ಮಾತ್ರವಲ್ಲದೆ, ಅನೇಕ ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ ಭಾರತೀಯ ಭಾಷೆಗಳಲ್ಲಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅವರು ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಕನ್ನಡ ಅಥವಾ ಅಸ್ಸಾಮಿ, ಬೆಂಗಾಲಿ, ಮರಾಠಿ, ಉರ್ದು ಭಾಷೆಗಳಲ್ಲಿ ಹಾಡಿರುವುದು ಅತ್ಯಂತ ಸ್ಪೂರ್ತಿದಾಯಕ ಸಂಗತಿ ಎಂದು ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಪ್ರತಿ ವರ್ಷ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಗೌರವಿಸಲು ಈ ದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಆಚರಿಸಲಾಗುತ್ತದೆ. ಇದು 154 ನೇ ಗಾಂಧಿ ಜಯಂತಿ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net