ಕಪ್ಪುವರ್ಣೀಯನ ಹತ್ಯೆ: ಹಂತಕ ಪೊಲೀಸ್​ಗೆ 22.5 ವರ್ಷ ಜೈಲು ಶಿಕ್ಷೆ

floyd
Published on

ವಾಷಿಂಗ್ಟನ್​: ಜಾರ್ಜ್​ ಫ್ಲಾಯ್ಡ್​ ಎಂಬ ಕಪ್ಪುವರ್ಣೀಯನನ್ನು ಹಿಂಸೆ ನೀಡಿ ಹತ್ಯೆಗೈದಿದ್ದ ಮಾಜಿ ಪೊಲೀಸ್​ ಅಧಿಕಾರಿ ಡೆರೆಕ್ ಚೌವಿನ್ಗೆ 22.5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಫ್ಲಾಯ್ಡ್​ನ ಕುತ್ತಿಗೆಯ ಮೇಲೆ ಮಂಡಿಯೂರಿ ಉಸಿರುಗಟ್ಟಿಸಿದ್ದ ಶ್ವೇತವರ್ಣೀಯ ಚೌವಿನ್​ನ ವರ್ತನೆಯು ಅಮೆರಿಕದಲ್ಲಿ ಜನಾಂಗೀಯ ಶೋಷಣೆಯ ವಿರುದ್ಧ ಭಾರೀ ಜನಾಂದೋಲನವನ್ನೇ ಸೃಷ್ಟಿಸಿತ್ತು.

2020 ರ ಮೇ 25 ರಂದು ಅಂಗಡಿಯೊಂದರಲ್ಲಿ ನಕಲಿ ನೋಟು ನೀಡಿದ್ದ ಹಿನ್ನೆಲೆಯಲ್ಲಿ ಫ್ಲಾಯ್ಡ್​ನನ್ನು ಬಂಧಿಸಲು ಬಂದಿದ್ದ ಮಿನ್ನಿಯಾಪೊಲೀಸ್​ ಪ್ರದೇಶದ ಮೂವರು ಶ್ವೇತವರ್ಣೀಯ ಪೊಲೀಸರು ಅಮಾನುಷವಾಗಿ ವರ್ತಿಸಿ, ಆತನನ್ನು ಕೊಂದೇ ಬಿಟ್ಟಿದ್ದರು. ಫ್ಲಾಯ್ಡ್​ನ ಕುತ್ತಿಗೆಯ ಮೇಲೆ ಚೌವಿನ್ ತನ್ನ ಮೊಣಕಾಲನ್ನು ಊರಿ ಸುಮಾರು 9 ನಿಮಿಷಗಳವರೆಗೆ ಆತ ಉಸಿರಾಡಲು ಆಗದೆ ನರಳಿ ಸಾಯುವಂತೆ ಮಾಡಿದ್ದು ವರದಿಯಾಗಿತ್ತು.

45 ವರ್ಷ ವಯಸ್ಸಿನ ಡೆರೆಕ್​ ಚೌವಿನ್​ಗೆ ಇಪ್ಪತ್ತೆರಡೂವರೆ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ ಮಿನ್ನಿಯಾಪೋಲಿಸ್ ಕೋರ್ಟ್, ಉತ್ತಮ ವರ್ತನೆ ತೋರಿದಲ್ಲಿ 15 ವರ್ಷಗಳ ನಂತರ ಆತನನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡಬಹುದು ಎಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net