ಅಭಿವೃದ್ಧಿಯಲ್ಲಿ ಪುರಸಭೆ ವಿಫಲ

kun
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕುಂದಾಪುರ ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಸದಸ್ಯರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸಿ, ಕೃಷಿ ಇಲಾಖೆ, ಪುರಸಭೆಯವರು ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಪರಿಹಾರದ ಕುರಿತು ಸರ್ಕಾರಕ್ಕೆ ಬರೆಯಲಿದ್ದೇವೆ. ಶಾಸಕ, ಸಚಿವರ ಜತೆ ಮಾತನಾಡಿದ್ದು, ಶನಿವಾರ ಶಾಸಕರ ಬಳಿ ನಿಯೋಗ ಹೋಗುವ ಎಂದರು.

ಕೋಡಿ ಭಾಗದ ಮಂಗಳೂರು ಹಂಚಿನ ಕಾರ್ಖಾನೆ ವಾರ್ಡ್, ಮದ್ದುಗುಡ್ಡೆ ವಾರ್ಡ್‌ನಲ್ಲಿ ಉಪ್ಪು ನೀರಿನ ಸಮಸ್ಯೆ ಇದೆ. ಎರಡು ದಶಕಗಳ ಬೇಡಿಕೆಗೆ ಪರಿಹಾರ ದೊರೆಯಲೇಬೇಕು ಎಂದು ಸದಸ್ಯರಾದ ಶ್ವೇತಾ ಸಂತೋಷ್, ರಾಘವೇಂದ್ರ ಖಾರ್ವಿ, ಕಮಲಾ ಮಂಜುನಾಥ್ ಒತ್ತಾಯಿಸಿದರು.

ಶ್ರೀಧರ ಶೇರೆಗಾರ್ ವಿಷಯ ಪ್ರಸ್ತಾಪಿಸಿ, ನೆಹರು ಮೈದಾನ ಹಸ್ತಾಂತರ, ಹಕ್ಕುಪತ್ರ ವಿತರಣೆ, ಉಪ್ಪುನೀರು ಸಮಸ್ಯೆ ಎಲ್ಲದಕ್ಕೂ ಹೋರಾಟವಾಗಬೇಕಿದ್ದರೆ ಪುರಸಭೆ ಆಡಳಿತದ ಅಸ್ಥಿತ್ವವೇ ವ್ಯರ್ಥ ಎಂದು ಟೀಕಿಸಿದರು. ನಾಮನಿರ್ದೇಶಿತ ಸದಸ್ಯ ಗಣೇಶ ಶೇರೆಗಾರ್ ದನಿಗೂಡಿಸಿದರು.

ಉಪತಹಸೀಲ್ದಾರ್ ಪ್ರಕಾಶ್ ಪೂಜಾರಿ ಪ್ರತಿಕ್ರಿಯಿಸಿ ದೇವಾಲಯದ ವತಿಯಿಂದ 80ವರ್ಷಗಳಿಂದ ನಡೆಸಲ್ಪಡುತ್ತಿರುವ ಸ್ಮಶಾನಕ್ಕೆ ಪುರಸಭೆಯಿಂದ ಇದುವರೆಗೆ 50ಲಕ್ಷ ರೂ.ಅನುದಾನ ನೀಡಲಾಗಿದೆ. ನೆಹರು ಮೈದಾನ ಹಸ್ತಾಂತರಕ್ಕೆ ಡಿಸಿಯಿಂದ ಪತ್ರ ಬಂದಿದ್ದು, 15 ದಿನಗಳಲ್ಲಿ ಪ್ರತಿಕ್ರಿಯಿಸುವುದಾಗಿ ಭರವಸೆ ನೀಡಿದರು.

ಗಿರೀಶ್ ದೇವಾಡಿಗ ಮಾತನಾಡಿ, 1985ರ ಕಾಯ್ದೆ ಪ್ರಕಾರ ಮೈದಾನ ಹಸ್ತಾಂತರಿಸಬೇಕು. ಆದರೆ ಮೈದಾನ ಹಸ್ತಾಂತರಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಖಾತ್ರಿಪಡಿಸಬೇಕು. ಜನಸಾಮಾನ್ಯರ ಕೆಲಸ ಕೂಡ ತಾಲೂಕು ಕಚೇರಿಯಲ್ಲಿ ಸರಾಗವಾಗಿ ನಡೆಯುವುದು ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ದೇವಕಿ ಸಣ್ಣಯ್ಯ, ರೋಹಿಣಿ ಉದಯ ಕುಮಾರ್, ಶ್ರೀಧರ್, ಸಂತೋಷ್ ಶೆಟ್ಟಿ, ಅಬ್ಬು ಮಹಮ್ಮದ್ ಅನುಮೋದಿಸಿದರು.

ಅಶ್ಪಕ್ ಕೋಡಿ ಮಾತನಾಡಿ, ಕೋಡಿಯಲ್ಲಿ ರೆಸಾರ್ಟ್ ನಿರ್ಮಾಣ ಕುರಿತು ದಾಖಲೆ ನೀಡಲಿಲ್ಲ. ಸದನದಲ್ಲಿ ಕೇಳಿದ ಪ್ರಶ್ನೆ ಉಲ್ಲೇಖವೂ ಸೂಕ್ತವಿಲ್ಲ. ಅಸಮರ್ಪಕ ಮಾಹಿತಿ ನೀಡಲು ಭ್ರಷ್ಟಾಚಾರ ಕಾರಣ ಎಂದು ಆರೋಪಿಸಿದರು.

ಅಧ್ಯಕ್ಷ ಶೆಣೈ, ಸಂತೋಷ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ. ಜತೆಯಾಗಿ ಪ್ರತಿಕ್ರಿಯಿಸಿ, ಸುಮ್ಮನೆ ಆರೋಪ ಸಲ್ಲ ಭ್ರಷ್ಟಾಚಾರಕ್ಕೆ ದಾಖಲೆ ಕೊಡಿ ಎಂದರು.

ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ್ ಜೆ, ಉಪ ವಲಯ ಅರಣ್ಯಾಧಿಕಾರಿ ವಿನಯ್, ನಿತ್ಯಾನಂದ, ಶ್ರೀಧರ್  ಉಪಸ್ಥಿತರಿದ್ದರು.

ಶಾಸಕರತ್ತ ಬೊಟ್ಟು ಅನಾವಶ್ಯಕ

ಗಿರೀಶ್ ದೇವಾಡಿಗ ಮಾತನಾಡಿ, ಉಪ್ಪು ನೀರಿನ ಸಮಸ್ಯೆ ಕುರಿತು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಮನವಿ ನೀಡಲಾಗಿತ್ತು. ಇದರ ನಿವಾರಣೆಗೆ ಮಾಜಿ, ಹಾಲಿ ಶಾಸಕರು ಪ್ರಯತ್ನಿಸಿದ್ದು, ಆದರೆ ಪುರಸಭೆಯಿಂದ ಯಾವ ಪ್ರಯತ್ನವೂ ನಡೆದಿಲ್ಲ. ಪ್ರತಿಯೊಂದಕ್ಕೂ ಶಾಸಕರನ್ನೇ ಹೊಣೆ ಮಾಡಲಾಗುತ್ತಿದ್ದು, ಜವಾಬ್ದಾರಿಯಿಂದ ಪುರಸಭೆ ನುಣುಚಿಕೊಳ್ಳುತ್ತಿದೆ. ಮನವಿ ಪತ್ರಗಳು ನೇರವಾಗಿ ಕಸದ ಬುಟ್ಟಿಗೆ ಸೇರುತ್ತಿದ್ದು, ಪುರಸಭೆಯಿಂದ ಯಾವುದೇ ಕಾರ್ಯ ನಡೆಯುತ್ತಿಲ್ಲ. ಕೋಡಿ, ಖಾರ್ವಿಕೇರಿ ಭಾಗದ ಜನರ ಹಕ್ಕುಪತ್ರ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ಪ್ರತಿಯೊಂದಕ್ಕೂ ಶಾಸಕರತ್ತ ಬೊಟ್ಟು ಮಾಡುವುದು ಅಸಮಂಜಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರಿಗೆ ತೊಂದರೆ

ಕಾಂಡ್ಲಾ ವನದಿಂದ ಮೀನಿನ ಸಂತಾನೋತ್ಪತ್ತಿ ಕಡಿಮೆಯಾಗಿ ಮೀನುಗಾರರಿಗೆ ತೊಂದರೆಯಾಗಿದೆ. ಉಬ್ಬರ ಇಳಿತದ ಸಂದರ್ಭ ನೀರು ಮನೆಗಳಿಗೆ ನುಗ್ಗುತ್ತದೆ ಎಂದು ರಾಘವೇಂದ್ರ ಖಾರ್ವಿ ಬೇಸರ ವ್ಯಕ್ತಪಡಿಸಿದರು. ಸಂದೀಪ್ ಖಾರ್ವಿ, ಶ್ವೇತಾ ಸಂತೋಷ್, ಗಿರೀಶ್ ದೇವಾಡಿಗ, ಶ್ರೀಧರ ಶೇರೆಗಾರ್, ಕಮಲಾ ಮಂಜುನಾಥ್ ಬೆಂಬಲಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ

21 ರಿಕ್ಷಾ ನಿಲ್ದಾಣಗಳ ಪೈಕಿ 11 ನಿಲ್ದಾಣಗಳ ನಕ್ಷೆ ತಯಾರಿಸಲಾಗಿದೆ. ಉಳಿಕೆ ಸರ್ವೇ ಮಾಡಲಾಗುವುದು ಎಂದು ಉಪತಹಸೀಲ್ದಾರ್ ಹೇಳಿದರು. ಸಂತೋಷ್ ಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿ ಸರ್ವೇ ಸರ್ವೇ ಸಂದರ್ಭ ಅರ್ಜಿದಾರ ರಿಕ್ಷಾ ಚಾಲಕರಿಗೆ ಮಾಹಿತಿಯೇ ನೀಡಿಲ್ಲ ಎಂದರು. ಗಣೇಶ್ ಶೇರಿಗಾರ್, ಸಂತೋಷ್ ಶೆಟ್ಟಿ ಜತೆಗೂಡಿದರು. ಪಾರಿಜಾತ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮಾಡುವ ಬಗ್ಗೆ ಗಿರೀಶ್, ಪ್ರಭಾಕರ್ ವಿ. ಪ್ರಸ್ತಾಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net