ವಿಜಯವಾಣಿ ಸುದ್ದಿಜಾಲ ಬೈಂದೂರು
ಜಾನುವಾರುಗಳ ಬಗ್ಗೆ ಪ್ರೀತಿ ಅಗತ್ಯ. ಅವುಗಳಲ್ಲಿ ದೈವತ್ವವಿದೆ. ಆದ್ದರಿಂದ ಹಸುಗಳನ್ನು ಹಸನಾಗಿ ಸಾಕಬೇಕು. ಅಲ್ಲದೇ ಹೈನುಗಾರಿಕೆ ಲಾಭದಾಯಕ ಉದ್ಯಮ, ಇದರಿಂದ ಉದ್ಯಮದ ಜತೆ ನಾವೂ ಬೆಳೆಯಬಹುದು ಎಂದು ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಮೇಕೋಡು ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಕರು ಸಾಕಣೆ ಯೋಜನೆ ನೋಂದಾಯಿತ ಕರುಗಳ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಹಾಲು ಉತ್ಪಾದಕರ ಸಹಕಾರಿ ಸಂಘ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಸುಮಾರು 70 ಲಕ್ಷ ರೂ.ಸ್ಥಿರಾಸ್ತಿ, ಸುಮಾರು 20 ಲಕ್ಷ ರೂ. ನಿರಖು ಠೇವಣಿ ಹೊಂದಿದೆ. ಕಳೆದ ಸಾಲಿನಲ್ಲಿ ಹಾಲು ಉತ್ಪಾದನೆಗಾಗಿ 2.28ಕೋಟಿ ರೂ. ಒಕ್ಕೂಟದಿಂದ ಸಂದಾಯವಾಗಿದೆ. 40 ಲಕ್ಷ ರೂ. ಮೌಲ್ಯದ ಕಟ್ಟಡ ಹೊಂದಿದ್ದು, ಕಳೆದ ಸಾಲಿನಲ್ಲಿ 8.50 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಅದರಲ್ಲಿ ಸದಸ್ಯರಿಗೆ ಶೇ.65ರಷ್ಟು ಬೋನಸ್ ನೀಡಲಾಗಿದೆ. ಕಳೆದ ಬಾರಿ ಒಕ್ಕೂಟದಿಂದ ನಾಲ್ಕು ಪ್ರಶಸ್ತಿ ನಮ್ಮ ಸಂಘಕ್ಕೆ ಲಭಿಸಿದೆ ಎಂದರು.
ಹೇರೂರು ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಕರು ಸಾಕಣೆ ಯೋಜನೆ ನೋಂದಾಯಿತ ಕರುಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಸಂಘಕ್ಕೆ ವಾರ್ಷಿಕ ಒಂದು ಲಕ್ಷ ಲೀ.ಕ್ಕಿಂತ ಹೆಚ್ಚು ಹಾಲು ಪೂರೈಸಿದ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹಾಗೂ 50 ಸಾವಿರ ಲೀ.ಕ್ಕಿಂತ ಹೆಚ್ಚು ಹಾಲು ಪೂರೈಸಿದ ಸಂಘದ ಉಪಾಧ್ಯಕ್ಷ ಕೋಣಾಲ್ ಸಂತೋಷ್ ಗೌಡ ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಹಾಲು ನೀಡುತ್ತಿರುವ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಮಾದವ ಐತಾಳ್, ಪಶುವೈದ್ಯೆ ಡಾ.ಶ್ರದ್ಧಾ ಖಾರ್ವಿ, ವಿಸ್ತರಣಾಧಿಕಾರಿ ರಾಜಾರಾಮ್, ಸಂಘದ ನಿರ್ದೇಶಕರಾದ ಯರುಕೋಣೆ ಗೋಪಾಲ ಶೆಟ್ಟಿ, ಎನ್.ಪದ್ಮನಾಭ ಅಡಿಗ, ವೈ.ಜಯರಾಮ ಹೆಬ್ಬಾರ್, ವೈ.ಗೋವಿಂದ ಹೆಬ್ಬಾರ್, ಎಂ.ಎನ್.ಬಾಬು ಪೂಜಾರಿ, ಉಳ್ಳೂರು ಭಾಸ್ಕರ ದೇವಾಡಿಗ, ಉಪ್ರಳ್ಳಿ ಉಮೇಶ ಪೂಜಾರಿ, ಕುಷ್ಟು ಯರುಕೋಣೆ, ಉಪ್ರಳ್ಳಿ ಲೀಲಾವತಿ ಪೂಜಾರಿ, ನೂಜಾಡಿ ಸುಶೀಲಾ ಗಾಣಿಗ, ಗೌರಿ ಬಿ.ಉಳ್ಳೂರು ಉಪಸ್ಥಿತರಿದ್ದರು. ನೇತ್ರಾವತಿ ಪ್ರಾರ್ಥಿಸಿದರು. ಸಂಘದ ಸಿಇಒ ಕುಶಲ ಗಾಣಿಗ ವರದಿ ಮಂಡಿಸಿದರು. ದಿನೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಇತ್ತೀಚಿನ ವರ್ಷಗಳಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ, ಇಲ್ಲಿ ಸುಮಾರು 5 ಲಕ್ಷ ಲೀಟರ್ ಹಾಲಿಗೆ ಬೇಡಿಕೆಯಿದ್ದು, ಕೇವಲ 3 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತದೆ, ಉಳಿದ ಹಾಲನ್ನು ಬೇರೆ ಒಕ್ಕೂಟಗಳಿಂದ ಖರೀದಿಸಲಾಗುತ್ತದೆ.
-ಮಾದವ ಐತಾಳ್ ಉಪ ವ್ಯವಸ್ಥಾಪಕ, ದ.ಕ. ಹಾಲು ಉತ್ಪಾದಕರ ಒಕ್ಕೂಟ