ಗೆಜ್ಜೆಭಾವಿ ಪಶ್ಚಕಂಥಿ ಹಿರೇಮಠದ ಜಾತ್ರೋತ್ಸವ ಇಂದು

ಚನ್ನಬಸವ ಶಿವಾಚಾರ್ಯರು- ಕರಿಬಸವ ಶಿವಾಚಾರ್ಯರ ಕರ್ತೃ ಗದ್ದುಗೆ.
ಚನ್ನಬಸವ ಶಿವಾಚಾರ್ಯರು- ಕರಿಬಸವ ಶಿವಾಚಾರ್ಯರ ಕರ್ತೃ ಗದ್ದುಗೆ.
Published on

ಅರಕೇರಾ: ತಾಲೂಕಿನ ಮುಷ್ಟೂರು ಗ್ರಾಪಂ ವ್ಯಾಪ್ತಿಯ ಗೆಜ್ಜೆಭಾವಿ ಗ್ರಾಮದ ಪಶ್ಚಕಂಥಿ ಹಿರೇಮಠದಲ್ಲಿ ಶ್ರೀ ಚನ್ನಬಸವ ಶಿವಾಚಾರ್ಯರು ಹಾಗೂ ಕರಿಬಸವ ಶಿವಾಚಾರ್ಯರ ಪುಣ್ಯಾರಾಧನೆ ಅಂಗವಾಗಿ ಫೆ.3ರಂದು ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9ಗಂಟೆಗೆ ಉಭಯ ಶ್ರೀಗಳ ಭಾವಚಿತ್ರದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ, ಸಂಜೆ 5.30ಕ್ಕೆ ಮಹಾ ರಥೋತ್ಸವ ಜರುಗಲಿದೆ. ಶ್ರೀಕೃಷ್ಣ ದೇವರಾಯ, ಹೈದರಾಬಾದ್ ನಿಜಾಮ ಮಠದ ಭಕ್ತರಾಗಿದ್ದು, ಅಕ್ಕಬುಕ್ಕರಿಗೆ ಪೀಠಾಧಿಪತಿಗಳು ಗುರುಗಳಾಗಿದ್ದರು ಎಂಬ ಪ್ರತೀತಿ ಇದೆ. ಮಠದ 20ನೇ ಪೀಠಾಧಿಪತಿ ಲಿಂ.ಶ್ರೀ ಚನ್ನಬಸವ ಶಿವಾಚಾರ್ಯರು ನೂರಕ್ಕೂ ಹೆಚ್ಚು ವರ್ಷ ಬದುಕಿದ್ದರು ಎಂದು ಹೇಳಲಾಗುತ್ತದೆ. ಈ ಭಾಗದ ಭಕ್ತರಿಗೆ 22ನೇ ಪೀಠಾಧಿಪತಿ ಲಿಂ.ಶ್ರೀ ಕರಿಬಸವ ಶಿವಾಚಾರ್ಯರು ಆರಾಧ್ಯ ದೈವರಾಗಿದ್ದಾರೆ. ಶ್ರೀಮಠದಲ್ಲಿ ಪುರಾಣ-ಪ್ರವಚನ, ಸಾಮೂಹಿಕ ವಿವಾಹ, ದಾಸೋಹ ಸೇರಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈಗಿನ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಹಾಗೂ ಅಭಿನವ ಕರಿಬಸವ ಶಿವಾಚಾರ್ಯರು ಭಕ್ತರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಕಾರ್ಯದಲ್ಲಿದ್ದಾರೆ.

ಸ್ವಾಮೀಜಿ ಪವಾಡ ಅಪ್ರತಿಮ: ಲಿಂ.ಕರಿಬಸವ ಶಿವಾಚಾರ್ಯರು ಈ ಭಾಗದ ನಡೆದಾಡುವ ದೇವರಾಗಿದ್ದಾರೆ. ವಾಕ್‌ಸಿದ್ಧಿ, ಪೂಜಾ ನಿಷ್ಠೆ, ದೂರದೃಷ್ಟಿ ಹೊಂದಿದ್ದರು. ನಿತ್ಯ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುತ್ತಿದ್ದರು. ಆಯುರ್ವೇದ ಪಾಂಡಿತ್ಯದಿಂದ ಭಕ್ತರಿಗೆ ಕಾಯಿಲೆಗಳಿಗೆ ಔಷಧ ನೀಡುತ್ತಿದ್ದರು. ಕುಷ್ಠರೋಗ, ಮೈ ಉಷ್ಣ, ಮೈಕೈ ನೋವು, ಕೆಮ್ಮು, ನೆಗಡಿ, ಜ್ವರ ಹಾಗೂ ಇತರ ಕಾಯಿಗಳಿಂದ ಬಳಲುತ್ತಿದ್ದವರಿಗೆ ಗಿಡಮೂಲಿಕೆಗಳಿಂದ ಗುಣಪಡಿಸಿದ ಉದಾಹರಣೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net