

ಬೆಂಗಳೂರು: ಟಿ.ಎಸ್. ನಾಗಾಭರಣ ಅವರ ‘ನೀಲಾ’ ಚಿತ್ರ ನೆನಪಿರಬಹುದು. 20 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದಲ್ಲಿ, ಗಾಯತ್ರಿ ಜಯರಾಮ್ ಎಂಬ ನಟಿಯನ್ನು ಅವರು ಪರಿಚಯಿಸಿದ್ದರು. ‘ನೀಲಾ’ ನಂತರ ‘ಸ್ವಾಮಿ’ ಎಂಬ ಚಿತ್ರದಲ್ಲೂ ಗಾಯತ್ರಿ ನಟಿಸಿದ್ದರು. ‘ಸ್ವಾಮಿ’ ಚಿತ್ರವೇ ಕೊನೆ. ಅದರ ನಂತರ ಚಿತ್ರರಂಗದಿಂದ ದೊಡ್ಡ ಬ್ರೇಕ್ ಪಡೆದಿದ್ದ ಅವರು, ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ‘ಉಪ್ಪೆನಾ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಈಗ ಯೋಗಿ ಅಭಿನಯದ ‘ಲಂಕೆ’ ಚಿತ್ರದಲ್ಲಿ ನಟಿಸುವ ಮೂಲಕ ಗಾಯತ್ರಿ ಕನ್ನಡಕ್ಕೆ ವಾಪಸ್ಸಾಗಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಚಿತ್ರವು, ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಬೇಕಿತ್ತು. ಚಿತ್ರ ಈಗ ಸ್ವಲ್ಪ ಮುಂದೂಡಲ್ಪಟ್ಟಿದ್ದು, ಅದಕ್ಕೂ ಮೊದಲು ಹಾಡುಗಳು ಬಿಡುಗಡೆಯಾಗಿವೆ. ಈ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಗಾಯತ್ರಿ ಸಹ ಬಂದಿದ್ದರು. ‘ಹಲವು ವರ್ಷಗಳ ನಂತರ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಈವರೆಗೂ ಮಾಡದ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂಥದ್ದೊಂದು ಅವಕಾಶ ಕೊಟ್ಟ ನಿರ್ದೇಶಕರಿಗೆ ಥ್ಯಾಂಕ್ಸ್’ ಎಂದು ನಿರ್ದೇಶಕ ರಾಮ್್ರಸಾದ್ಗೆ ಧನ್ಯವಾದ ಸಲ್ಲಿಸಿದರು. ‘ಲಂಕೆ’ ಚಿತ್ರದಲ್ಲಿ ಯೋಗಿ, ಸಂಚಾರಿ ವಿಜಯ್, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ತರ್ ನರೋನ್ಹಾ ಮುಂತಾದವರು ನಟಿಸಿದ್ದಾರೆ.