ಆತನ ಐಡಿಯಾಗಳೋ...; ಕ್ಯಾಪ್ಟನ್ಸಿ ವಿಚಾರವಾಗಿ​ ಗೌತಿ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ

Gautam Gambhir'
Published on

ನವದೆಹಲಿ: ಟೀಮ್​ ಇಂಡಿಯಾದ ನೂತನ ಕೋಚ್ ಆಗಿ ಗೌತಮ್​ ಗಂಭೀರ್​ ನೇಮಕಗೊಂಡ ಬಳಿಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ತಮಗೆ ಬೇಕಾದ ಸಹಾಯಕ ಸಿಬ್ಬಂದಿ ಬೇಕೆಂದು ಹಠ ಹಿಡಿದಿದ್ದ ಗಂಭೀರ್​ ಆ ಬಳಿಕ ಆಟಗಾರರಿಗೆ ಟಾಸ್ಕ್​ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಹಾರ್ದಿಕ್​ ಪಾಂಡ್ಯರನ್ನು ನಾಯಕನನ್ನಾಗಿ ನೇಮಿಸದ ಕುರಿತು ಮಾಜಿ ಕ್ರಿಕೆಟಿಗರೊಬ್ಬರು ಗೌತಮ್​ ಗಂಭೀರ್​ ವಿರುದ್ಧ ಕಿಡಿಕಾರಿದ್ದು, ಬಿಸಿಸಿಐ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಆಶಿಶ್​ ನೆಹ್ರಾ, ಹಾರ್ದಿಕ್​ನನ್ನು ನಾಯಕನನ್ನಾಗಿ ನೇಮಿಸಿದ ವಿಚಾರ ನನಗೇನೂ ಆಶ್ಚರ್ಯವನ್ನುಂಟು ಮಾಡಿಲ್ಲ. ಕ್ರೀಡೆ ವಿಚಾರಕ್ಕೆ ಬಂದರೆ ಈ ರೀತಿ ನಡೆಯುತ್ತಲೇ ಇರುತ್ತವೆ. ಹೊಸ ಕೋಚ್​ ಬಂದಾಗ ಈ ರೀತಿ ಆಗುವುದು ಸಹಜ. ಕೋಚ್​ ಹಾಗೂ ನಾಯಕನ ಆಲೋಚನೆಗಳಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಆದರೆ, ಆತನ (ಗಂಭೀರ್​) ಆಲೋಚನೆಗಳು ಬೇರೆ ದಿಕ್ಕಿನಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ.

Ashish Gambhir

ಹಾರ್ದಿಕ್​ನನ್ನು ನಾಯಕನನ್ನಾಗಿ ನೇಮಿಸದ ಬಗ್ಗೆ ಕೋಚ್​ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್‌ಗೆ ಬಹಳ ಮುಖ್ಯವಾದ ಆಟಗಾರ ಎಂಬುದನ್ನು ಇವರು ಮರೆತಿರುವಂತೆ ಕಾಣುತ್ತಿದೆ. ಆದರೆ, ಶುಭಮನ್​ ಗಿಲ್​ರನ್ನು ಮೂರು ಸ್ವರೂಪಗಳಿಗೆ ಉಪನಾಯಕನನ್ನಾಗಿ ನೇಮಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಭವಿಷ್ಯದ ದೃಷ್ಠಿಯಿಂದ ಈ ನಿರ್ಧಾರ ಒಳ್ಳೆಯದಾಗಿದೆ.

ಆತನಿಗೆ ಕಲಿಯುವ ಹುಮ್ಮಸಿದ್ದು, ಆತ ಯಾವುದಕ್ಕೂ ಯೋಚಿಸುವುದಿಲ್ಲ. ಮುಂದಿನ ದಿನಗಳಲ್ಲಿ ಆತನಿಗೆ ಹೆಚ್ಚಿನ ಹೊಣೆ ಸಿಗುವ ನಿರೀಕ್ಷೆಯಿದೆ. ಆದರೆ, ಆತನ (ಗಂಭೀರ್​) ಐಡಿಯಾ ಏನಿದೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡುವ ಎಂದು ಮಾಜಿ ಕ್ರಿಕೆಟಿಗ ಆಶಿಶ್​ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net