ತಮ್ಮ ತಂಡದಲ್ಲಿ ಕೊಹ್ಲಿಗೆ ಸ್ಥಾನ ನೀಡಿ ರೋಹಿತ್​, ಬುಮ್ರಾಗೆ ಶಾಕ್​ ಕೊಟ್ಟ ಗೌತಮ್​ ಗಂಭೀರ್​!

Gautam Gambhir
Published on

ನವದೆಹಲಿ: ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಪಯಣ ಶ್ರೀಲಂಕಾ ವಿರುದ್ಧದ ಸರಣಿಯಿಂದಲೇ ಆರಂಭವಾಗಿದೆ. ಮೊದಲ ಸರಣಿಯಲ್ಲೇ ಗಂಭೀರ್​ ಮಿಶ್ರ ಫಲಿತಾಂಶವನ್ನು ಪಡೆದರು. ಭಾರತ ತಂಡ ಟಿ20 ಸರಣಿಯನ್ನು ಗೆದ್ದುಕೊಂಡಿತು. ಆದರೆ, ಏಕದಿನ ಸರಣಿಯನ್ನು ಕಳೆದುಕೊಂಡಿತು. ಗೌತಿ ಪ್ರಸ್ತುತ ತಮ್ಮ ಮುಂದಿನ ಸವಾಲುಗಳಿಗೆ ತಯಾರಿ ನಡೆಸುತ್ತಿದ್ದಾರೆ.

ಭಾರತ ತಂಡ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್​ನ ಫೈನಲ್ ಪಂದ್ಯವನ್ನು ಆಡಬೇಕಾದರೆ, ಭಾರತ ತಂಡಕ್ಕೆ ಈ ಸರಣಿಯನ್ನು ಗೆಲ್ಲುವುದು ಬಹಳ ಮುಖ್ಯ.

ಲಂಕಾ ಪ್ರವಾಸದ ಬಳಿಕ ಗಂಭೀರ್​ ಅವರು ದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಇದರ ನಡುವೆ ಸ್ಪೋರ್ಟ್ಸ್ ಕೀಡಾಗೆ ನೀಡಿದ ಸಂದರ್ಶನದಲ್ಲಿ, ಗಂಭೀರ್ ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಭಾರತ ತಂಡವನ್ನು ಆಯ್ಕೆ ಮಾಡಿದರು. ಅಚ್ಚರಿಯ ಸಂಗತಿ ಏನೆಂದರೆ, ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ಗಂಭೀರ್​ ಯಾವುದೇ ಸ್ಥಾನ ನೀಡಲಿಲ್ಲ. ಎಂ.ಎಸ್​. ಧೋನಿಯನ್ನು ತಮ್ಮ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದರು. ಮಾಜಿ ಕೋಚ್ ರಾಹುಲ್ ದ್ರಾವಿಡ್, ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್​ ಸೇರಿದಂತೆ ದಿಗ್ಗಜ ಆಟಗಾರರಿಗೆ ಸ್ಥಾನ ನೀಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದರು. ರಾಹುಲ್ ದ್ರಾವಿಡ್ ಅವರನ್ನು ಒನ್ ಡೌನ್‌ನಲ್ಲಿ ತೆಗೆದುಕೊಂಡರು. ನಾಲ್ಕನೇ ಸ್ಥಾನಕ್ಕೆ ಸಚಿನ್ ತೆಂಡೂಲ್ಕರ್​ ಅವರನ್ನು ಆಯ್ಕೆ ಮಾಡಿದರು. ನಂತರ ಐದು ಮತ್ತು ಆರನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಅವರನ್ನು ತೆಗೆದುಕೊಂಡರು. ಧೋನಿಯನ್ನು ವಿಕೆಟ್ ಕೀಪರ್ ಹಾಗೂ ನಾಯಕನಾಗಿ ಆಯ್ಕೆ ಮಾಡಿದರು. ವೇಗದ ಬೌಲಿಂಗ್ ಪಟ್ಟಿಯಲ್ಲಿ ಜಹೀರ್ ಖಾನ್ ಮತ್ತು ಇರ್ಫಾನ್​ ಪಠಾಣ್ ಅವರನ್ನು ಸೇರಿಸಲಾಗಿದ್ದು, ಸ್ಪಿನ್ ವಿಭಾಗದಲ್ಲಿ ಅನಿಲ್ ಕುಂಬ್ಳೆ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ನೀಡಿದ್ದಾರೆ.

ಗಂಭೀರ್​ ಆಯ್ಕೆ ಮಾಡಿದ 11ರ ಬಳಗ ಈ ಕೆಳಕಂಡಂತಿದೆ

ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್ ಹಾಗೂ ಜಹೀರ್ ಖಾನ್. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net